Sunday, December 14, 2008

ಪತ್ರ

ಆಗ ನಾವು ಅಣ್ಣನ ಜೊತೆ ಚಾಮರಾಜನಗರದಲ್ಲಿ ಇದ್ವಿ , ಅಣ್ಣ JSS ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾದ್ಯಪಕರಗಿದ್ದರು.ಆಗ ನಾನಿನ್ನು ಐದನೇ ತರಗತಿಯಲ್ಲಿದ್ದೆ ... ಆಗ ನನ್ನ ಸ್ನೇಹಿತನಿಗೆ ಬರೆದ ಪತ್ರ ಇದು . ಮೊನ್ನೆ ಭುವನೇಶ್ವರಕ್ಕೆ ಹೋದಾಗ ಅವನ ರೂಮಿನಲ್ಲಿ ಸಿಕ್ಕಿದ್ದು , ಏನಿಲ್ಲ ಅಂದ್ರು ಇಪ್ಪತ್ತು ಸಲ ಇದೆ ಪತ್ರವನ್ನು ಓದಿದ್ದೆ .. ನಿಮ್ಮಲ್ಲೂ ಹಂಚಿ ಕೊಳ್ಳುವ ಆಸೆ .

ಪ್ರೀತಿಯ ಗಣೇಶನಿಗೆ,

ಅಣ್ಣ ಮತ್ತು ನಾವೆಲ್ಲರೂ ಇಲ್ಲಿ ಕ್ಷೆಮವಾಗಿದ್ದೇವೆ , ನಿನ್ನ ಕ್ಷೇಮ ಸಮಚಾರಕ್ಕೆ ಪತ್ರ ಬರಿ .
ಹೋದ ವಾರ ನಾವು ಕರಿನಂಜನಪುರದವರ ಮೇಲೆ ಮ್ಯಾಚ್ ಹಾಕಿದ್ದಿವಿ . ನಾವು ಸೋತು ಹೋದೆವು . ತೂಡ್ ಬಾಬು ಎರಡು ಕ್ಯಾಚ್ ಬಿಟ್ಟ . ನಾನು ಮತ್ತು ಅಣ್ಣ ಬೂದಿಪಡಗ ಕಾಡಿಗೆ ಹೋಗಿದ್ದೆವು . ಗಂಟೆ ಗಿರೀಶ ನಾನು ಬರುತ್ತೀನಿ ಅಂತ ಗಲಾಟೆ ಮಾಡುತ್ತಿದ್ದ . ನಾನು ಅಣ್ಣನಿಗೆ ಗೊತ್ತಿಲ್ಲದೇನೆ ಶಾಲೆಗೆ ರಜೆ ಹಾಕಿ ಕರಿವರ್ದನರಾಜನ ಬೆಟ್ಟಕ್ಕೆ ಒಬ್ಬನೇ ಹೋಗಿದ್ದೆ . ಮನೆಯಲ್ಲಿ ತೂಡ್ ಬಾಬು ಬಿಟ್ರೆ ಬೇರೆ ಯಾರಿಗೂ ಗೊತ್ತಿಲ್ಲ , ಬೆಟ್ಟ ಚೆನ್ನಾಗಿತ್ತು . ನೀನು ಮನೆಗೆ ಬಂದಾಗ ಅಣ್ಣನಿಗೆ ಏನು ಹೇಳಬೇಡ .

ಮೊನ್ನೆ ನಾವೆಲ್ಲರೂ ಅಣ್ಣನ ಕಾಲೇಜಿಗೆ ಹೋಗಿದ್ದೆವು , ಅಣ್ಣ ಭೂತಗಾಜಿನಲ್ಲಿ ಅಮೀಬಾ ತೋರಿಸಿದರು . ಸಾಗರದಿಂದ ಶಾಂತಲ ಆಂಟಿ ಬಂದಿದ್ದರು , ನಮಗೆಲ್ಲ ದೇವಿ ಭುವನ ಮನಮೋಹಿನಿ ಹಾಡು ಹೇಳಿಕೊಟ್ಟರು .

ಇಲ್ಲಿ ಬೇರೆ ಏನು ವಿಶೇಷ ಇಲ್ಲ , ನೀನು ಪತ್ರ ಬೇರೆ
ಇಂತಿ
ಸಂತೋಷ

Friday, December 12, 2008

ಪ್ರೀತಿ-ಪ್ರೇಮ ಮತ್ತೊಂದು ನೆನಪು ..

ಪ್ರೀತಿ -ಪ್ರೇಮ ಇದ್ದಕ್ಕೆ ಏನೇ definition ಕೊಟ್ರುನೂ ಯಾವುದು ಸರಿಯಾಗಿ ಆರ್ಥ ಆಗೋಲ್ಲ . ಅದು ಎಷ್ಟೇ ಮುಲಭೂತ ಇಚ್ಚಾ ಕ್ರಿಯೇಯಾಗಿರಬೇಕು ಅಂತ ಪ್ರಯತ್ನಿಸಿದರು ಕೆಲವೊಮ್ಮೆ ಸ್ವಾರ್ಥ ಎಲ್ಲಿಂದಲೂ ಬಂದು ಅಡಗಿ ಕೂತಿರುತ್ತದೆ ....ಎಲ್ಲವನ್ನು ಮತ್ತೆ ತಿದ್ದಿ ಬಿಡೋಣ ಅನ್ನುವಷ್ಟರಲ್ಲಿ ಭಯಂಕರವಾದ ಒಂದು ego ಕಾಡಿಬಿಡುತ್ತೆ..ಸರಿ ಅದೇನೇ ಆಗಲಿ ಹೇಳೇ ಬಿಡೋಣ ... ಇಲ್ಲ ಕಣೇ.. ಎಲ್ಲಾ ನಂದೇ ತಪ್ಪು ದಯವಿಟ್ಟು ಕ್ಷಮಿಸಿಬಿಡು .. ಎಲ್ಲೋ ಒಂದು ಕಡೆ ಇಬ್ಬರು ಬೆಚ್ಚಗೆ ಕುಳಿತು ಕನಸುಗಳನ್ನು ಹೆಕ್ಕಿ ತೆಗೆಯೋಣ. ನಮ್ಮಿಬ್ಬರ ಒಳ್ಳೆತನ , ಕೆಟ್ಟತನ, ಪ್ರೀತಿ, ಕೋಪ ಎಲ್ಲವೂ ನಮ್ಮಿಬ್ಬರಷ್ಟು ಬೇರಾರಿಗೂ ಅರ್ಥವಾಗ್ಲಿಕ್ಕೆ ಸಾದ್ಯ ಇಲ್ಲ .. ನೀನ್ ಹೇಳೋದು ನಿಜ ಕಣೋ ..ನಮ್ಮಿಬ್ಬರ ಒಳ್ಳೆತನ , ಕೆಟ್ಟತನ, ಪ್ರೀತಿ, ಕೋಪ ಎಲ್ಲವೂ ನಮ್ಮಿಬ್ಬರಷ್ಟು ಬೇರಾರಿಗೂ ಅರ್ಥವಾಗ್ಲಿಕ್ಕೆ ಸಾದ್ಯ ಇಲ್ಲ , ಆದ್ರೆ ನಿನ್ನೆಲ್ಲ ತಿಕ್ಕಲುತನಗಳನ್ನು, ನಿನ್ನ ಅಬ್ಯಾಸ-ದುರಭ್ಯಸಗನ್ನು ನನ್ನಿಂದ ಸಹಿಸಲು ಸಾದ್ಯ ಇಲ್ಲ .. I think we both are nothing to do with each other. ಛೆ ! ನನ್ನ ತಿಕ್ಕಲುತನ , ಅದಕ್ಕೊಂದು ಆಕೆಗೆ ನನ್ನ outline. ಎಷ್ಟೊಂದು ಗೋಜಲು ಮಾಡಿಕೊಂಡು ಬಿಟ್ಟಿರ್ತಿವಿ. ಇಲ್ಲ... ನನ್ ಸ್ವಭಾವ ಇದಲ್ಲ ..ನಾನೊಬ್ಬ ತುಂಬಾ Serious ಆದ ಮನುಷ್ಯ . ನನಗೆ ನನ್ನದೇ ಆದ ಸಿದ್ದಾಂತಗಳಿದೆ, ಚಿತ್ರ-ವಿಚಿತ್ರ ಆದರ್ಶಗಳನ್ನು Fevicol ಹಾಕಿಕೊಂಡು ಅಂಟಿಸಿಕೊಂಡಿದ್ದೀನಿ. ನಿಜ ಅದರ ಮೇಲೆ ಬೇರೆ ಯಾರದು ಸಹ ಅದಿಕಾರ ಇರೋದಿಲ್ಲ . . ಆದರು ಕೆಲವೊಮ್ಮೆ ಹೀಗನ್ನಿಸಿದ್ದು ನಿಜ .. ನನ್ನೆಲ್ಲ ಹುಚ್ಚು ಆದರ್ಶಗಳನ್ನು , ಸಿದಾಂತಗಳನ್ನು, ತಿಕ್ಕಲುತನವನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಆಕೆಯೊಂದಿಗೆ ಕನಸು ಕಾಣುವ ಆಸೆ ಇನ್ನು ಬಿಟ್ಟು ಹೋಗಿಲ್ಲ .

ನಿನ್ನಲಿರೋ ಈ ಗುಣ ನನಗೆ ಇಷ್ಟ ಆಗ್ಲಿಲ್ಲ ಅನ್ನೋದಿಕ್ಕಿಂತ , ಅದು ನನಗೆ ಅರ್ಥ ಆಗ್ಲಿಲ್ಲ ಕಣೇ ..ಸ್ವಲ್ಪ ಬಿಡಿಸಿ ಹೇಳು ಅಂತ ಕೇಳೋದ್ರಲ್ಲಿ ಹೆಚ್ಚು ಬುದ್ದಿವಂತಿಕೆ ಅಡಗಿದೆ ಅಂತ ನನಿಗೆ ಅರ್ಥವಗೊಷ್ಟರಲ್ಲಿ ..Yes, I also think we both are nothing to do with each other ಅನ್ನೋ ತಿರ್ಮಾನಕ್ಕೆ ಬಂದಾಗಿತ್ತು

ನೆನಪುಗಳೇ ಹಾಗೆ ಎಲ್ಲೂ ಹೋಗಲಾರವು , ಭಾವನೆಯ ಯಾವುದೋ ಒಂದು ನಾದಕ್ಕೆ ಮತ್ತೆ ವಾಪಸ್ ಬಂದು ಗಿರಗಿಟ್ಲೆ ಹೊಡಿತ ಇರುತ್ತೆ .. ಎಂದು ಒಂದು ರಾತ್ರಿ ಸಕತ್ ನಿದ್ದೆ ಮಾಡ್ತಾ ಇರುವಾಗ ಜಲ್ ಅಂತ ಒಂದು ಅಲಾರಂ ಕೊಟ್ಟು ಎಬ್ಬಿಸಿ ಬಿಟ್ಟಿರುತ್ತೆ.

ಪದಗಳಿದ್ದರೂ ಬರೆಯಲು ಆಗ್ತ ಇಲ್ಲ .. ಈ ಪ್ರೀತಿ-ಪ್ರೇಮಗಳೇ ಹೀಗೆ ಎಲ್ಲಾ ಇದ್ದು ಏನೂ ಎಲ್ಲವೇನೂ ..ಎಲ್ಲದಕ್ಕೂ ಒಂದು saftey-vault ಹುಡುಕಿಟ್ಟುಕೊಳ್ಳೋದು ತುಂಬಾ ಕಷ್ಟ

ನ್ಯೂ ಇಯರ್ ... I am going to stop cigerette
ಹೊಸ ವರ್ಷದ ನನ್ನ resolution..
ಅಸಲಿಗೆ ಕಳೆದ ಏಳೆಂಟು ಹೊಸ ವರ್ಷಗಳಿಂದಲೂ ಆ resolution ಬದಲಾಗಿಲ್ಲ

ಖಂಡಿತ ಬದಲಾಗುತ್ತೆ ..

Wednesday, December 10, 2008

ಕ್ರೈಸಿಸ್ಸು ..!!


ಈ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ , ಆದ್ರೂ ಅದರ ಬಗ್ಗೆ ಗೊತ್ತಿರುವಷ್ಟು ಏನಾದ್ರೂ ಬರೀಬೇಕು ಅನ್ನಿಸ್ತು .

ಲೆಮನ್ ಬ್ರದರ್ಸ್ ಬ್ಯಾಂಕ್ ದಿವಾಳಿಯಾಗಿ ಹೋಗಿದೆ , ಈ ಬ್ಯಾಂಕು ಅಮೇರಿಕಾದ ನಾಲ್ಕನೆ ಅತಿ ದೊಡ್ಡ ಇನ್ವೆಸ್ಟ್ ಮೆಂಟ್ ಬ್ಯಾಂಕು . ೧೯೨೯ ರಲ್ಲಿ ಆದ great depression ನಲ್ಲೂ ಬದುಕುಳಿದಿತ್ತು , ಬರಿ ಮೂರೇ ತಿಂಗಳಲ್ಲಿ ೨೪೦೦ ಕೋಟಿ ಗಳಷ್ಟು ಲಾಭ ಮಾಡಿತ್ತು . ನಮ್ ಬೆಂಗಳೂರಿನ IIM ಪದವಿದರನ್ನು ಕೆಲ್ಸಕ್ಕೆ ತಗೊಂಡು , ವರ್ಷಕ್ಕೆ ಏನಿಲ್ಲ ಅಂದ್ರು ಒಂದುವರೆ ಕೋಟಿಯಷ್ಟು ಸಂಬಳ ಕೊಟ್ಟು ಸಾಕಿತ್ತು . ಈಗ ಕಥೆ ಏನಾಗಿದೆ ಅಂದ್ರೆ ಆ ಎಲ್ಲಾ ಮೇಧಾವಿಗಳು ಬಟ್ಟೆ ಪ್ಯಾಕ್ ಮಾಡ್ಕೊಂಡು ವಾಪಸ್ ಮನೆಗೆ ಬಂದಿದ್ದಾರೆ .

ಅಸಲಿಗೆ ಕಥೆ ಏನಪ್ಪಾ ಅಂದ್ರೆ - ಅಮೆರಿಕದಲ್ಲಿ ಇರುವ finacial institution ಗಳು ಅಲ್ಲಿ ಇರೋ ಜನಗಳಿಗೆ ಯರ್ರಾ ಬಿರ್ರೀ ಸಾಲ ಕೊಡ್ತು . ಆ ಸಾಲಕ್ಕೆ sub-prime ಅಂತ ಹೆಸರು .. ಮಜಾ ಅಂದ್ರೆ ಈ ಸಾಲ ಆದಾರರಹಿತ ಸಾಲ . ಯಾವ documents ಕೇಳೋಲ್ಲ . ಅದೇ ನಮ್ co-operative ಬ್ಯಾಂಕ್ ಲ್ಲಿ ಸಾಲ ಕೇಳಿ ನೋಡಿ bank statement ಇಂದ ಹಿಡಿದು ಶೆಟ್ಟಿ ಅಂಗಡಿ ಚೀಟಿ ಲೆಕ್ಕದವರೆಗೂ ಕೇಳ್ತಾರೆ . ಕೊನೆಗೆ ಸಾಲನು ಕೊಟ್ಟಿ ಆಯಿತು , ಸಿಕ್ಕಪಟ್ಟೆ ಮನೆಗಳು ಕಟ್ಟಿದಾಯಿತು . ಬ್ಯಾಂಕ್ ನವರು ಕೊಟ್ಟ ಸಾಲಗಳಿಗೆ ಯಾವುದೇ ಸ್ಥಿರವಾದ ಬಡ್ಡಿ ದರ ಇರೋದಿಲ್ಲ ಅದನ್ನು ARM (adjustable rate mortgage) ಅಂತಾರೆ . ಅಮೇರಿಕಾದ ರೆಸೆರ್ವ್ ಬ್ಯಾಂಕ್ ಕೊಡುವ ಬಡ್ಡಿ ದರಕ್ಕೆ ಅನುಗುಣವಾಗಿ ಬಡ್ಡಿ ಕಟ್ ಬೇಕು . ಆ ರೆಸೆರ್ವ್ ಬ್ಯಾಂಕ್ ಇದ್ದಿಕಿದಂತೆ ಬಡ್ಡಿ ಜಾಸ್ತಿ ಮಾಡಿ , ಜನ ಮನೆ ಕಳಕೊಂಡು ಕಾರಲ್ಲಿ ವಾಸ ಮಾಡೋ ಹಾಗೆ ಮಾಡ್ತು .



ಆದರೂ ಸಹ ಈ ಬ್ಯಾಂಕುಗಳು ಮತ್ತೆ ಸಲದ ಮೇಲೆ ಸಾಲ ಕೊಡ್ತಾ ಹೋಯಿತು . ಹೇಗೆ ಅಂದ್ರೆ ನಿಮಗೆ ಯಾವುದೇ ಕೆಲಸ, ಆಸ್ತಿ ಇಲ್ದೆ ಇದ್ರೂ ಪರವಾಗಿಲ್ಲ , ಸಾಲ ಕೊಡಲು ನಾವು ಸಿದ್ದ (NINJA - no income, no job or assets), ಹೀಗೆ ಕೊಟ್ಟು ಕೊಟ್ಟು sub-prime ಸಾಲ ೧೦೦ ಕೋಟಿಗೂ ದಾಟಿ ಹೋಗಿತ್ತು . ಅವ್ರು ಪ್ಲಾನ್ ಏನಪ್ಪಾ ಅಂದ್ರೆ real estate ಬೆಲೆ ಯಾವಾಗ್ಲೂ ಜಾಸ್ತಿ ಇದ್ದೆ ಇರುತ್ತೆ ಅಂತ . ಈ ಬ್ಯಾಂಕುಗಳು ಅವೇ ಕೆಲವೊಂದು ಸಲದ documents ಗಳನ್ನೂ ಸೃಷ್ಟಿ ಮಾಡಿ , ಅಲ್ಲಿ ಇರೋ ದಲ್ಲಾಳಿಗಳಿಗೆ ಮಾರಿ ಸೇಫ್ ಆಗೋಕ್ಕೆ ಪ್ರಯತ್ನ ಪಡ್ತು . ಆ ಸೃಷ್ಟಿ ಮಾಡಿದ್ದ documents ಗಳನ್ನು MBS (mortgage based security) ಅಂತ ನಾಮಕರಣ ಮಾಡಿ .. ಆ ದೇಶದಲ್ಲಿ ಇರೋ insurance ಕಂಪನಿ ಹತ್ತಿರ ವಿಮೆ ಬೇರೆ ಮಡ್ಸ್ಕೊಂದ್ರು ... ಆಮೇಲೆ ಈ MBS ಗಳನ್ನ bond ಗಳಾಗಿ ಪರಿವರ್ತಿಸಿ ಪ್ರಪಂಚದ ಎಲ್ಲಾ ಕಡೆ ಮರೋದಕ್ಕೆ ಶುರು ಮಾಡಿದ್ರು . ಇನ್ನೊಂದು ಮಜಾ ಅಂದ್ರೆ ಆ ಬಾಂಡ್ ಗೆ 50 ರುಪಾಯಿ ಇದ್ರೆ ಲೆಮನ್ ಬ್ಯಾಂಕು 4000 ರೂಪಾಯಿಗೆ ಮಾರಿದ್ದರು ಅದನ್ನ CDO (Collaterised Debt Obligations) ಅಂತ ಅರ್ಥವಾಗದ ಹೆಸರು ಕೊಟ್ಟು , ಜನಗಳನ್ನ Confuse ಮಾಡಿದ್ದರು. ಕೊನೆಗೆ ಮನೆಗಳು ಸಿಕ್ಕಾಪಟ್ಟೆ ಆದ ಮೇಲೆ .. Real estate ಮಕಾಡೆ ಮಲಿಕೊಲ್ತು . ಮನೆ ಹರಾಜಿಗೆ ಕುಗುವವರು ಗತಿ ಇಲ್ಲದ ಹಾಗೆ ಆಯಿತು . ಆಗ ಶುರುವಾಯಿತು ನೋಡಿ ಮಾರಿ ಹಬ್ಬ .

ಭಾರತದಲ್ಲಿದ್ದ ವಿದೇಶಿ ಹೂಡಿಕೆದಾರರು ಬಾಗಿಲು ಮುಚ್ಕೊಂಡು ಓಡಿ ಹೋಗೋಕೆ ಶುರು ಮಾಡಿದ್ರು . ತಲೆ ಮಾಸಿದ ವಿತ್ತ ಮಂತ್ರಿ ಚಿದಂಬರಂ .. ನಮಗೇನು ಆಗಿಲ್ಲ ನಾವು ಭಾರಿ strongu ಅಂತ statement ಕೊಟ್ರು. ಎಲ್ಲಾ ಕಡೆ Globalization ಅದು ಇದು ಅಂತ ಇರೋ ನಾವು ಅಮೆರಿಕಕ್ಕೆ ಹೊಡ್ತ ಬಿದ್ದಿದೆ ಅಂದ್ರೆ , ನಮ್ ದೇಶಕ್ಕೂ ತೊಂದ್ರೆ ಇದೆ ಅಂತ ಚಿದಂಬರಂ ಗೆ ಆಮೇಲೆ flash ಆಯಿತಂತೆ . ಊರೆಲ್ಲ ಕೊಳ್ಳೆ ಹೊಡೆದ ಮೇಲೆ ನಮ್ ಚಿದಂಬರಂ ಅಂಬಾನಿ ಮನೆಗೆ ಹೋಗಿ ಬಾಗಿಲು ಬದ್ರ ಮಾಡಿ ಬಂದರಂತೆ . ಇನ್ನು ನಮ್ ದೇವೇ ಗೌಡ್ರು Global economic crisis ಗೆ ಅಮೇರಿಕಾದ ಪರವಾಗಿ ಚಂಡೀ ಹೋಮ ಮಾಡಿಸ್ತರಂತೆ... ಅದು ಅಲ್ದೇನೆ ಆತ್ಮ ಚರಿತ್ರೆ ಬರೀತೀನಿ ಅಂತ ಕುಂತವ್ರೆ ..ಬಚ್ಚೆ ಗೌಡ್ರು ನಾನು ಕಮ್ಮಿ ಇಲ್ಲ ಕಲ ನಾನು ಬರಿತಿವ್ನಿ ....!

ಐಯ್ಯೋ ಮ್ಯಾಟ್ರು ಎಲ್ಲೆಲ್ಲೊ ಹೊಂಟ್ ಹೋಯಿತು....


ಈಗ ಆರ್ಥಿಕ ಭಿಕ್ಕಟ್ಟಿಗೆ ಪರಿಹಾರ ಅಂದ್ರೆ .. ಯಾವ ಕಂಪೆನಿಗಳು ಕೆಲಸಗರನ್ನು ತೇಗಿ ಬಾರ್ದು.. ಅಲ್ಲಿ ಇಲ್ಲಿ ಬಚಿಟ್ಟಿರೋ ದುಡ್ಡನ್ನು ತೆಗಿ ಬೇಕು . ಜನಗಳಿಗೆ ಖರ್ಚು ಮಾಡಲು ಕೊಡ ಬೇಕು .. ಖರ್ಚ ಆದ್ರೆ ತಾನೆ ನಮ್ ಫ್ಯಾಕ್ಟರಿ ಗಳು production ಮಾಡೋಕೆ ಸಾದ್ಯ . ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಹಾಕಿ , ಅವರಿಗಿರುವ ರಿಯಾಯಿತಿ ಗಳನ್ನ ನಿಲ್ಲಿಸಬೇಕು . ಅಗತ್ಯ ಇರೋ ವಸ್ತುಗಳ ಬೆಲೆ ಇಳಿಸಬೇಕು .. ಮುಖ್ಯವಾಗಿ UPA ಸರ್ಕಾರ ಶ್ರೀಮಂತರಿಗೆ ಬಕೇಟು ಹಿಡಿಯೋದನ್ನ ಬಿಡಬೇಕು . ಈಗಿರೋ ಗೃಹ ಸಚಿವ ಚಿದಂಬರಂ ಸ್ವಂತ ಗೃಹಗಳನ್ನು ಕಟ್ಟಿಸೋದನ್ನ ಬಿಡ ಬೇಕು (ಛೆ ! ನನ್ ಕೊನೆ ಹೆಸರು ಬೇರೆ ಇಟ್ಟಿಕೊಂಡು ಬಿಟ್ಟಿದಾರೆ .. ಇಲ್ಲ ಅಂದಿದ್ದರೆ!! )

Friday, December 5, 2008

ಸಂಭಂದ , ಕವಿತೆ .. etc

ಮೊನ್ನೆ ನನ್ ಅಣ್ಣ ಫೋನ್ ಮಾಡಿ - " ಸಂತೋಷಾ , ಯಾವಗಪ್ಪ ಮದುವೆ ಆಗ್ತಿಯ ? ವಯಸ್ಸು ಆಗ್ತಾ ಬಂದಲಪ್ಪ ? ಏನ್ ಕಥೆ ನಿಂದು ..? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ .. ನಾನಿದ್ದವನು ಏನೂ ಒಂದು ಹಾರಿಕೆ ಉತ್ತರ ಕೊಟ್ಟು ಸುಮ್ಮನಾದೆ . ಒಬ್ಬನೇ ಕೂತು ಯೋಚನೆ ಮಾಡ್ತಾ , ನಾನಗೆ ಹಾಳು ಮಾಡಿಕೊಂಡ ಸಂಬದಗಳು , ಅವೇ ಕಳಚಿಕೊಂಡದ್ದು , ಹೆಸರೇ ಇಲ್ಲದ ಕೆಲವು ಸಂಭಂದಗಳು ...ಎಲ್ಲ ಸಂಬದಗಳು ಹಾಗೆ .. ಯಾವಕ್ಕು ಸರಿಯಾಗಿ ಈಜು ಬರೋದಿಲ್ಲ . ಭಾವಗಳ ಬಾವಿಯಲ್ಲಿ ಬಿದ್ದು ಒದ್ದಾಡ್ತಾ ಇರುತ್ತೆ . ಎಲ್ಲದಕ್ಕೂ ಹಗ್ಗ ಕಟ್ಟಿ ಮೇಲೆತ್ತುವಷ್ಟರಲ್ಲಿ ಮತ್ತೊಂದಷ್ಟು ಬಾವಿಗೆ ಬಿದ್ದಿರುತ್ತೆ ... ಯಾವುದೂ ಒಂದು ಪುಸ್ತಕದಲ್ಲಿ ಓದಿದ ನೆನಪು - Don't put too much emotional weight on any relationship

****************************************************************************

ರೀ ಸಂತೋಷ್ , ತುಂಬ ಚೆನ್ನಾಗಿ ಕವಿತೆ ಬರಿತಿರಿ , ನೀವ್ ಕವಿನ ? - ಹೀಗೊಬ್ಬಕೆ ಕೇಳಿದ ಪ್ರಶ್ನೆಗೆ ನಗು ತಡೆಯಲಾಗಲಿಲ್ಲ !

ಇಲ್ಲ ಕಣಮ್ಮ ನಾನ್ ಕವಿ ಅಲ್ಲ , ಕವಿತೆ ಬರೆದ ಮಾತ್ರ ಕವಿ ಆಗೋಕೆ ಸಾದ್ಯ ಇಲ್ಲ . ನಮಗೆ ಅಂಟಿ ಎಷ್ಟೋ ಮನೋಪ್ರವ್ರುತ್ತಿಗಳಲ್ಲಿ ಕವಿತೆ, ಬರಹ ಸಹ ಒಂದು . ಆಕೆಗೆ ಮನೋಪ್ರವೃತ್ತಿ ಅಂದ್ರೆ ಏನು ಅಂತ ತಿಳಿಸಿ ಹೇಳೋಷ್ಟರಲ್ಲಿ ...ಯಪ್ಪಾ ! ಸಾಕ್ ಸಕಗೊಯಿತು .

****************************************************************************

ಯು.ಎಸ್ ರಿಟರ್ನ್ ಗೆಳೆಯನೊಬ್ಬನ ನಡೆ/ನುಡಿ ಪಾಯಿಂಟ್ ಗಳು

೧. In US ಅಥವಾ When I was in US.... ಆಮೇಲೆ ಮಿಕ್ಕಿದ್ದು

೨. "Still I am feeling that essence of Jet Lag" - ಬಡ್ಡಿ ಮಗ ಅಲ್ಲಿಂದ ವಾಪಸ್ ಬಂದು ನಾಲ್ಕು ತಿಂಗಳು ಆಗಿರತ್ತೆ

೩. ಏರ್ಪೋರ್ಟ್ ನಲ್ಲಿ ಬ್ಯಾಗಿಗೆ ಅಂಟಿಸಿದ್ದ , ಏರ್ವೇಸ್ ಸ್ಟಿಕರ್ ಒಂದು ವರ್ಷ ಆದರು ತೆಗ್ದಿರೋದಿಲ್ಲ - ಬಿಟ್ರೆ ಹಣೆ ಮೇಲೆ ಅಂಟುಸ್ಕೊಂಡು ಓಡಾಡೋದೊಂದು ಬಾಕಿ

೪. Table Manners ಬಗ್ಗೆ ಎರಡು ಗಂಟೆ ಲೆಕ್ಚರ್ - ( ಬಿಡ್ಲಾ ಸಾಕು ನಾನು ಒಂದ್ ವರ್ಸ ಪೈವ್ ಸ್ಟಾರ್ ಹೋಟ್ಲು ನಲ್ಲಿ ಮಣ್ಣ ಹೊತ್ತಿವ್ನಿ .. ನಂಗು ವಸಿ ಗೊತ್ತೈತೆ ಅಂತ ಹೇಳಿ ಬಾಯಿ ಮುಚ್ಚಿಸಿದ್ದಯಿತು)

೫. ಯಾವ್ ಬ್ರಾಂಡ್ ಎಣ್ಣೆಗೆ ಏನ್ ಮಿಕ್ಸ್ ಮಾಡಿದ್ರೆ ಎಷ್ಟು ಕಿಕ್ ಕೊಡುತ್ತೆ ಅನ್ನೋದು (ಹಂಗೆ ಹೇಳ್ದೊನು ಒಂದ್ ದಿನ ಫುಲ್ ಟೈಟ್ ಆಗಿ , ಕಲರ್ ಕಲರ್ ವಾಂತಿ ಮಾಡ್ಕೊಂಡಿದ್ದ ... ಯಾಕ್ಲ ಹಿಂಗಾಯಿತು ಅಂತ ಕೇಳಿದಿಕ್ಕೆ, ಸ್ಥಳ ಮಹಾತ್ಮೆ ಅಂತಾನೆ )

೬. ಯಾಕ್ಲ ಇಂಡಿಯಾಗೆ ವಾಪಸ್ ಬಂದೆ ಅಲ್ಲೇ ಇರಬೇಕಾಗಿತ್ತು ಅಂತ ಕೇಳಿದ್ರೆ .....No man, ಅಲ್ಲೂ ಸಿಕ್ಕಾಪಟ್ಟೆ ಕಾಸ್ಟ್ ಕಟ್ಟಿಂಗು. ಟಾಯ್ಲೆಟ್ ಪೇಪರ್ ನ ಎರಡು ಕಡೆ use ಮಾಡಿ ಅಂತಾರೆ !!

Saturday, November 29, 2008

ಶ್ರೀ ಸರ್ವಧಾರಿ ನಾಮ ಸಂವತ್ಸರದ ಕಾರ್ತಿಕ ಮಾಸ ..etc..etc..

ಸಾಮಾನ್ಯವಾಗಿ ನಾನು ಯಾವುದೇ ಮದುವೆ ಸಮಾರಂಭಗಳಿಗೆ ಹೋಗಲು ಇಷ್ಟ ಪಡುವುದಿಲ್ಲ .. ಕೊನೆಗೆ ತುಂಬಾ ಬಲವಂತದಿಂದ ಒಂದು ಮದುವೆಗೆ ಹೋಗಿ ಬಂದದ್ದಾಯಿತು ..


ಮದುವೆ ಮನೆಯಲ್ಲಿ ಎಷ್ಟೊಂದು ಸಂಭ್ರಮ , ಅದ್ದೂರಿ , ಸಡಗರ, ರಾತ್ರಿಯಾಯಿತೆಂದರೆ ಜಗಮಗಿಸುವ ದೀಪ .. ಇನ್ನು ಚಂದದ ಚೆಲುವೆಯರನ್ನು ನೋಡ್ತಾ ಇದ್ರೆ .. ಆಹಾ !! , ಅದರಲ್ಲೂ ಒಂದು ಪೆಗ್ ಹಾಕೊಂದೂದ್ರಂತು ಮುಗೀತ್ ಕಥೆ .. ಸ್ವರ್ಗಕ್ಕೆ ಅರ್ದ ಗೇಣು ಬಾಕಿ .


ಮದುವೆ ಛತ್ರಕ್ಕೆ entry ಕೊಡ್ತಾ ಇದ್ದ ಹಾಗೆ , ಹಿರಿಯರೊಬ್ಬರು " ಏನಪ್ಪಾ ಚೆನ್ನಾಗಿದ್ದೀಯ , ಎಷ್ಟು ದಿನ ಆಯಿತು ನಿನ್ ನೋಡಿ , ಊರಲ್ಲಿ ಎಲ್ಲಾ ಆರಾಮ ? ಎಲ್ಲಿ ಅವ್ರು ಬಂದಿಲ್ಲ ?? ( ಯಾರು ಅಂತ ಕೇಳೋಕೆ ಹೋಗಲಿಲ್ಲ .. ಇಲ್ಲ ಅವ್ರು ಸ್ವಲ್ಪ ಬ್ಯುಸಿ ಅಂದ್ಬಿಟ್ಟೆ !) ಪಾಪ ಯಾರ್ ಬಗ್ಗೆ ಕೇಳಿದ್ರು ಅಂತ ಗೊತ್ತಾಗ್ಲಿಲ್ಲ , ನಾನು ಜಾಸ್ತಿ ತಲೆ ಕೆಡ್ಸೋಕ್ಲಿಲ್ಲ... ಮಜಾ ಅಂದ್ರೆ , ನನ್ ಬಗ್ಗೆ , ನಮ್ ಊರ್ ಬಗ್ಗೆ ವಿಚಾರಿಸಿದ ಅವ್ರು ಯಾರು ಅಂತಾನೆ ಇವತ್ತಿನವರ್ಗು ಗೊತ್ತಾಗ್ಲಿಲ್ಲ ..!.


ಇನ್ನು ಊಟ ಬರೋಬ್ಬರಿ 22 item, (ತುಂಬಾ carefull ಆಗಿ ಕೌಂಟು ಮಾಡಿದ್ದು) ಅಬ್ಬಬ್ಬಾ ! ಎಂತ ರುಚಿ ಅಂತಿರ .. ಊಟ ಆದ್ ಮೇಲು ಕೆಲವು ಮಂದಿ ಕೈಗೆ ಹತ್ತಿದ ಸುವಾಸನೆಯನ್ನು , ಕೈ ಮೂಸಿ ಮೂಸಿ ಅನುಭವಿಸ್ತಾ ಇದ್ರೂ (ಬಲಗೈ ಮುಸ್ತಾ ಇದ್ರೋ , ಎಡಗೈ ಮುಸ್ತಾ ಇದ್ರೋ ಅಂತ confuse ಆಗಿದೆ )


ಇದೆಲ್ಲವೂ ಮದುವೆ ಛತ್ರದ ಒಂದು ಭಾಗದ ಸಂಭ್ರಮ , ಇನ್ನೊಂದು ಭಾಗ ನೋಡಬೇಕು ... ಎಂತಹ ವೈಚರಿತ್ಯ !ಪುಟ್ಟ ಹುಡುಗಿ ತಲೆ ಮೇಲೆ ಹೊತ್ತ ಸಾರಿನ ಪಾತ್ರೆ .. ತಲೆ ಕೂದಲಿಂದ ಇಳಿತಿರೋ ಸಾರು ..ಮುಖಕ್ಕೆ ಅಂಟಿರುವ ಅನ್ನದ ಅಗಳುಗಳು.. ಚಿಕ್ಕ ಮಗು ರಚ್ಚೆ ಹಿಡಿದು ಅತ್ತು ಅತ್ತು ಸುಸ್ತಾಗಿ ಆ ಮುಸರೆಯಲ್ಲೇ ಮಲಗಿರೂದು .. ಮಸಿ ಹಿಡಿದ ಹೆಣ ಭಾರದ ಅನ್ನದ ಪಾತ್ರೆಯನ್ನು ತಾನೊಬ್ಬಳೇ ಹೊತ್ತು ತಂದು ಬೆಳ್ಳಗಾಗಿಸಲು ಹೊರಟ ಇವುಗಳ ತಾಯಿ ..

ಇಂಥ ದೃಶ್ಯಗಳು ಎಲ್ಲಾ ಮದುವೆ ಮನೆಯಲ್ಲಿ ಸಾಮನ್ಯ ..ಯಾರು ಅದರ ಬಗ್ಗೆ ಅಷ್ಟು ಗಮನ ಕೊಡೋದಿಲ್ಲ ಬಿಡಿ ..


ಇನ್ನು ಮದುವೆ ಮುಗಿದ ಮೇಲೆ ಹೆಣ್ಣಿನ ಕಡೆಯ ಹಿರಿಯ ಕೆಲಸದವರಿಗೆ Tips ಕೊಡೂದು ಒಂದು ವಾಡಿಕೆ .. ಮಗಳ ಮದುವೆಗೆ ಅಳಿಯ ದೇವರಿಗೆ skoda ಕಾರಿಂದ ಹಿಡಿದು ಹಾಕೊಳೋ ಚಡ್ಡಿ ವರೆಗೂ ದಾರಾಳವಾಗಿ ಖರ್ಚ ಮಾಡಿ ..ಕೊನೆಗೆ ಮುಸುರೆ ತಿಕ್ಕುವವರ tips ವಿಷಯಕ್ಕೆ ಬಂದಾಗ ಭಯಂಕರ ಜಿಪುನಾಗ್ರೆಸರಾಗಿ ಬಿಡ್ತಾರೆ .. ಆತ ಆ ಸಮಯದಲ್ಲಿ ಸ್ವಾರ್ಥಿ ಆಗಿರೋದಿಲ್ಲ , ಸ್ವಾರ್ತಿಯಾಗಿದ್ದರೆ ಪರವಾಗಿಲ್ಲ . ಅದು ಅವನ ತುಚ್ಹತನ ಅಂದ್ರೆ ತುಂಬಾ Cheap ಆಗಿಬಿಡ್ತಾನೆ

ಹುಡುಗ ಒಳ್ಳೆಯವನಾಗಿದ್ದು , ಆಕೆಯನ್ನು ಚೆನ್ನಾಗಿ ಸಾಕಿದರೆ ಬಚಾವ್ .. ಒಂದು ವೇಳೆ postmortem report ಜೊತೆಗೆ ಹುಡುಗಿ pack ಆಗಿ ಮನೆಗೆ ಬಂದ್ರೆ .. ಕೈ ಕೈ ಮೂಸಿಕೊಂಡ ಸಂಭಂದಿಕರು , ಮಟ ಮಟ ಮದ್ಯಹನ್ನದಲ್ಲಿ ಅರುಂದತಿ ನಕ್ಷತ್ರ ತೋರಿಸಿದ ಪುರೋಹಿತರು "ಅಯ್ಯೋ ಪಾಪ" ಅನ್ನೋದು ಬಿಟ್ರೆ ಏನು ಮಾಡಲಾರರು

Wednesday, November 26, 2008

ಊರು ಮನೆ ಇಲ್ಲದವರು


ಅದೊಂದು ಅದ್ಭುತವಾದ ಕಲೆ , ನಿಜವಾದ ನಟನೊಬ್ಬ ಮಾತ್ರ ರಂಗ ಭೂಮಿಯಲ್ಲಿ ಉಳಿಯಬಲ್ಲ . ಅಲ್ಲಿ ದಿನವೂ ಹಬ್ಬದ ವಾತವರಣ ,
ಹೊಟ್ಟೆ ತುಂಬ ಊಟವಿಲ್ಲದಿದ್ದರು ಹೊಟ್ಟೆ ತುಂಬ ನಗು ತುಂಬಿರುತ್ತದೆ .
ನಿಜಕ್ಕೂ ಪ್ರತಿಬಾವಂತ ಕಲಾವಿದರಿರುತ್ತಾರೆ , ಸ್ಟೇಜ್ ಮೇಲೆ ಬಂದಾಗ ಪ್ರೇಕ್ಷಕರು ಅಂಡು ಅಲುಗಾಡದಂತೆ ಕೂರುತ್ತಾರೆ . ಕೆಲವೊಂದು ಕೆಳ ಮಟ್ಟದ ಸಂಭಾಶನೆಗಳಿದ್ದರು ರಂಜನೀಯವಾಗಿರುತ್ತದೆ .


"ಎಲ್ಲಿಯು ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು " ಎಂಬ ಕವಿ ವಾಣಿ ಅವರಿಗೆ ಚೆನ್ನಾಗಿ ಒಪ್ಪುತ್ತದೆ , ಎಲ್ಲಿಯು ನಿಲ್ಲದ ಊರೂರು ತಿರುಗಾಟ ಮನೆಯು ಇಲ್ಲ ಕೊನೆಯು ಇಲ್ಲ . ಅವರು ಒಂದು ಊರಲ್ಲಿ ಹೆಚ್ಚೆಂದರೆ ಆರರಿಂದ ಒಂದು ವರ್ಷದವರೆಗೆ ಮಾತ್ರ ಉಳಿಯಬಲ್ಲರು .
ಒಂದು ದಿನ ಹೌಸ್ ಫುಲ್ ಕಂಡರೆ ಒಂದು ವಾರ ಊಟಕ್ಕೆ ಯೋಚನೆ ಇಲ್ಲ .
ಒಂದು ವೇಳೆ ನಸೀಬು ಮಕಾಡೆ ಮಲ್ಕೊಂಡು ಜೋರಾಗಿ ಮಳೆ ಬಂದು ಒಳಗೆ ನೀರು ತುಂಬಿ ಕೊಂಡರಂತೂ ..ಅವರ ಕಥೆ ಹೇಳ ತೀರದು . ಮೂರೂ ದಿನ ಹೀಗೆ ಜೋರು ಮಳೆ ಬಂದದ್ದೆ ಆದರೆ ನಾಲ್ಕನೆಯ ದಿನಕ್ಕೇ ಕಟ್ಟಿದ್ದ ಕಂಬ , ಇಟ್ಟ ಗೂಟ , ತಕಡು, ಹಾರ್ಮೋನಿಯಮ್ ಪೆಟ್ಟಿ , ತಬಲಾ , ಡ್ರಮ್ ಸೆಟ್ಟು , ಪರದೆ , ಹಗ್ಗ ಎಲ್ಲವನ್ನು ಗಂಟು ಕಟ್ಟಿ ಊರ ಜನಗಳ ಹತ್ತಿರ ಭಿಕ್ಷೆ ಬೀಡಿ ಟೆಂಪೂ ದವನಿಗೆ ಅರ್ದಂಬರ್ದ ಬಾಡಿಗೆ ಕೊಟ್ಟು ಬೇರೆ ಊರಿಗೆ ಪ್ರಯಾಣ . ಮನೆಯು ಇಲ್ಲ ಕೊನೆಯು ಇಲ್ಲ .
ಇನ್ನು ನಟರ ಮತ್ತು ಕೆಲಸಗಾರರ "ಪಗಾರ" ಎಂಬ ಅವರ ಪದ ದೂರದ ಮಾತು . ಇನ್ನು ಅಲ್ಲಿ ಇರುವ ಕೆಲಸಗಾರರು ಅಂದರೆ ರಂಗ ಪಟ್ಟಿ ಮಾಡುವವರು , ನೀರು ತುಂಬುವವರು , ಪರದೆ ಕಟ್ಟುವವರು - ಇವರ ಬದುಕಂತೂ ಯಾವ ಶತ್ರುವಿಗೂ ಬೇಡ .

ಎಲ್ಲಾ ವೃತ್ತಿ ರಂಗ ಭುಮಿಯವರ ಹಣೆ ಬರಹ ಇಷ್ಟೇ ..
ಎಲ್ಲೂ ಕೆಲವೊಂದು ನೆಮ್ಮದಿಯಿಂದ ಇದ್ದರೂ ಇರಬಹುದು . ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಹಣೆ ಪಟ್ಟಿ ಹಚ್ಚಿಕೊಂಡು ಸರ್ಕಾರದ ದುಡ್ಡಿಗಾಗಿ ಹೊಂಚು ಹಾಕುತ್ತಿರುವ , ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ದೊಡ್ಡ ದೊರೆಗಳ Sponsorship ಗಾಗಿ ಅವರ ಮನೆಯ ಗೇಟು ಕಾಯುವ ಹವ್ಯಾಸಿ ರಂಗ ಭೂಮಿಯವರ ಎದುರು ವೃತ್ತಿ ರಂಗ ಭೂಮಿ ಕಲಾವಿದರು ಹೆಚ್ಚು ಸ್ವಾಭಿಮಾನಿಗಲೆನಿಸುವುದಿಲ್ಲವೇ..??

Friday, November 21, 2008

ಮನದ ಮನೆಗೆ

ಸರಿಯಾಗಿ ನೆನಪಿಲ್ಲ , ನನ್ನ ಕಾಲೇಜು ದಿನಗಳಲ್ಲಿ ಬರೆದ ಕವಿತೆ ಇದು . ಆಗ ಈ ಕವಿತೆಗೆ "ಬಾ ಗೆಳತಿ" ಅಂತ ಹೆಸರು ಕೊಟ್ಟಿದ್ದೆ . ಈ ಕವಿತೆಯನ್ನು ಓದಿದ ನನ್ನ ಅಣ್ಣ "ಯಾವ ಗೆಳತಿಗೊಸ್ಕರ ಬರೆದಿದ್ದಿಯಪ್ಪಾ ಅಂತ ಸ್ವಲ್ಪ ಸೀರಿಯಸ್ ಆಗೇ ಕೇಳಿದ್ದರು.

ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ

ಮೆಲ್ಲ ತೆರೆದು ನೋಡು ಮನದ ಕದವನ್ನು
ನೂರು ಕವಿತೆ ನೂರು ಹಾಡು
ಕಾದಿದೆ ಪೂರ್ಣ ಕುಂಭದಲ್ಲಿ
ಬಾ ಗೆಳೆತಿ ಎಲ್ಲ ಉಕ್ಕಿ ಹರಿಯುವ ಮುನ್ನ

ಜಗದ ಮಾತು ಮಸಲತ್ತು ಏನೇ ಇರಲಿ
ನಮ್ಮಾಸೆ ಕನಸುಗಳೇ ನಮಗೆ ಹೆಚ್ಚು
ಕಣ್ರೆಪ್ಪೆಯಲ್ಲಿ ಬಚ್ಚಿಟ್ಟು ಸಾಕುವೆ ಗೆಳತಿ
ನನ್ನೀ ಕಂಗಳು ಮುಚ್ಚುವ ತನಕ

ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ

ಕೆಲವರು ಮನೆಯ ಕದ ತಟ್ಟಿದ್ದರೂ ಒಳ ಬರಲು ಯಾರು ದೈರ್ಯ ಮಾಡಿಲ್ಲ . ಕೊನೆಗೆ ನನ್ನ ಮನದ ಮನೆಯಲಿ ಒಬ್ಬನೇ ಬೆಚ್ಚನೆ ನೆನಪುಗಳನ್ನು ಹೊದ್ದು ಮಲಗಿರಬೇಕಾದರೆ ... ಯಾರೂ ಬಂದು ಬಾಗಿಲು ತಟ್ಟಿದ ಹಾಗೆ , ನೋಡಿದರೆ ಯಾರು ಇಲ್ಲ !! .. ಆಗೆಲ್ಲ ಈ ಕವಿತೆ ನೆನಪಾಗಿ ಯಾರೂ ಒಬ್ಬಳಿಗೆ ಆಮಂತ್ರಣ ಕೊಟ್ಟ ಹಾಗೆ , ಮನದ ಮನೆಗೆ ಸ್ವಾಗತ ಕೋರಿದ ಹಾಗೆ .. ಛೆ !! ಮತ್ತೆ ಆದೇ ಭಾವುಕತೆ .. ಆ ಭಾವುಕತೆಗೆ ಇನ್ನೊಂದು ಕವಿತೆ , ಇನ್ನೊಂದು ಭಾವನೆ ...

Wednesday, November 19, 2008

ಬ್ರೆಡ್,ಬಟರ್ ಅಂಡ್ ಜಾಮ್ !!

ಬೆಂಗಳೂರಿನ ಜನಕ್ಕೆ ಟ್ರಾಫಿಕ್ ಜಾಮ್ ಏನು ಹೊಸದಲ್ಲ , ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಅದರ ಕಹಿ ಅನುಭವ ಆಗೇ ಆಗಿರುತ್ತೆ , ಆದ್ರೆ ಮಾತ್ರ ಬೆಂಗಳೂರಿನಲ್ಲಿ ಇದ್ದಿದ್ದಕ್ಕೆ ಮರ್ಯಾದೆ . "ಟ್ರಾಫಿಕ್ ಜಾಮ್ " ಅನ್ನೋ ಪದ ಕೆಲವೊಮ್ಮೆ ತುಂಬ ಸಹಾಯ ಮಾಡುತ್ತೆ ಕಂಡ್ರಿ . ನಮ್ ಆಫೀಸ್ ಹುಡ್ಗನ್ನ ಯಾವೊದೋ ಕೆಲಸದ ಮೇಲೆ ಹೊರಗೆ ಕಳಿಸಿ .. ಎಷ್ಟೊತ್ತದ್ರು ಬರದೆ ಇದ್ದಾಗ , ಹಲೋ ! ಎಲ್ಲಿದಿಯಪ್ಪ ರಾಜಕುಮಾರ್ ! M G ರೋಡಿಂದ ಮಲ್ಲೇಶ್ವರಂಗೆ ಬರೋಕ್ಕೆ ಎರಡು ಘಂಟೆ ಕಾಲ ಬೇಕೆನಪ್ಪ ... ಅದಕ್ಕವನು , ಸಾರ್ .. ಇಲ್ಲ ಸಾರ್ ಫುಲ್ ಜಾಮು ! ಗಾಡಿ ಮೋವೇ ಆಗ್ತ ಇಲ್ಲ ಸಾರ್ !... ಮುಗೀತ್ ಬೇರೆ ಮಾತಾಡ್ದಂಗಿಲ್ಲ . ಇದು ಪ್ರತಿ ದಿನದ ಕಥೆ . ಆದ್ರೆ ಮೊನ್ನೆ "ಕುಮಾರ್ಸಾಮಿ ಜಾಮ್ " ಬೆಂಗಳೂರು ಟ್ರಾಫಿಕ್ ಇತಿಹಾಸದಲ್ಲಿ ಎಂದೂ ಕಂಡರಿಯದ ಮಹಾನ್ ಸಾದನೆ !! .. ನಾನು ಕೂಡ ಸಣ್ಣ ಪುಟ್ಟ ಟ್ರಾಫಿಕ್ ಜಾಮ್ ಸಾಧನೆ ಮಾಡಿದ್ದೀನಿ .. ಕಳೆದ ವಾರ ಮಿನ್ನರ್ವಾ ಸರ್ಕಲ್ಲ್ನಲ್ಲಿ ಸ್ನೇಹಿತನ ಜಿಪ್ಸಿ ಓಡಿಸ್ತಿನಿ ಅಂತ ಬಲವಂತವಾಗಿ ಗಲಾಟೆ ಮಾಡಿ ತಗೊಂಡು , ರಿವೆರ್ಸ್ ತೆಗಿಯೋಕೆ ಆಗದೇನೆ ಅಡ್ಡಡ್ಡ ನಿಲ್ಸಿ ಕಾಲ್ ಘಂಟೆ ಜಾಮ್ ಮಾಡಿದ್ದೆ . ಕೊನೆಗೆ ಆಟೋ ಡ್ರೈವರ್ ಯಿಂದ ಸ್ಕೂಟಿ ಹುಡ್ಗೀರ್ ವರೆಗೂ ಖರಾಬಾಗಿ ಬೈಸಿಕೊಂಡು ಪೋಲಿಸ್ ಮಾಮಂಗೆ 200 ಕೊಟ್ಟು ಬಂದಿದ್ದಾಯಿತು . ಅಷ್ಟಕ್ಕೆ 200 ಅಂದ್ರೆ ಈ ಮಣ್ಣಿನ ಮಗನ ಮಗನ್ ಸಾಧನೆಗೆ ಎಷ್ಟು ದಂಡ ಹಾಕಬೋದು ಅಂತ ನೀವೇ ಹೇಳಿ !

ನಾನೂ ಈ ದೇಶದಲ್ಲಿನ ಸುಮಾರು ಎಲ್ಲಾ ಪಟ್ಟಣಗಳ ಟ್ರಾಫಿಕ್ ಜಾಮ್ ಗಳಿಗೆ ಸಾಕ್ಷಿಯಾಗಿದ್ದೇನೆ , ಆದ್ರೆ "ಕುಮಾರ್ಸಾಮಿ ಜಾಮ್" ಮುಂದೆ ಯಾವ್ದು ಸಮ ಆಗೋಕೆ ಸಾದ್ಯ ಇಲ್ಲ ಬಿಡಿ ...

ಅವತ್ತು ಹೀಗೆ ಜಾಮ್ ಮದ್ಯ ನನ್ ಜಿಂಗ್ಲಿ ನ (ನನ್ ಬೈಕ್ ಹೆಸರು ) ನಿಲ್ಸಕೊಂಡಿದ್ದೆ... ಪಕ್ಷದ ಎಲ್ಲಾ ಚಮಚ , ಸ್ಪೂನು ಸೌಟು , ಬಾಟಲಿಗಳು ಗುಂಪುಗುಂಪಾಗಿ ಫುಟ್ ಪಾತು , ರೋಡು ಸರ್ವೆಯ್ ಮಾಡ್ತಾ ಹೋಗ್ತಾ ಇತ್ತು , ಅಲ್ಲೊಬ್ಬ ಬಾಟಲಿ ನನ್ ಹತ್ರ ಬಂದು ... ಸಾರ್ ನೆಸ್ತು ನಮ್ ಅಣ್ಣನೆಯ..ಪ್ರಿಮ್ ಮಿನಿಸ್ರು .. ಅವನ್ ಅ ****ನ್ನ್ ಯಾರ್ ಸಾರ್ ರಾಕೇಟು , ನಾವು ಚಂದ್ರನ್ಕೆ ಹೊಲಿಕಾಪ್ತ್ರು ಕಲ್ಸತಿವಿ (ಅವನ್ ಭಾಷೆನಲ್ಲೇ ಬರೆಯಲಾಗಿದೆ ಟೈಪಿಂಗ್ ಮಿಸ್ಟೇಕ್ ಅಲ್ಲ ). ನಾನೂ ಬೇರೆ ಮಾತನಾಡದೇನೆ ಮನಸ್ಸಿನಲ್ಲೇ ನಕ್ಕೊಂಡು ಜಂಗ್ಲಿ ಮೇಲೆ ಕೂತಿದ್ದೆ ನನ್ ಜಂಗ್ಲಿನು ನಗ್ತಾ ಇತ್ತು ಅಂತ ಕಾಣುತ್ತೆ ... . ನಾನ್ ಮೊದ್ಲೇ ಬಾಯಿ ಬಡ್ಕ , ನಾನ್ ಒಂದು ಮಾತಡೋದು ಅದು ಹೋಗಿ ಇನ್ನೇನೋ ಆಗೋದು .... ಯಾಕ್ ಬೇಕು .. ಮೊದ್ಲೇ ಎಲ್ರು ಫುಲ್ ಟೈಟು ...ಬಿಟ್ಟಿದ್ರೆ ಬಡ್ಡಿಮಕ್ಳು ರೋಡ್ ಮದ್ಯ ಏನೇನ್ ಮಾಡ್ತಾ ಇದ್ರೋ ದೇವರಿಗೆ ಗೊತ್ತು ! ಈ ಪುಢಾರಿಗಳದ್ದು ಒಂದು ಕಥೆ ಆದ್ರೆ , ಪೋಲಿಸ್ನವರದು ಕಥೆ ಇನ್ನೊಂದ್ ತರ .. ಟ್ರಾಫಿಕ್ ಕಂಟ್ರೋಲ್ ಮಾಡರಯ್ಯ ಅಂದ್ರೆ .... ಹೆಲ್ಮೆಟ್ ಹಾಕಿಲ್ದೆ ಇರೋರನ ಹಿಡ್ಯೋದು, ಲೈಸೆನ್ಸ್ ತೋರ್ಸು ಅನ್ನೋದು , ಬಡ್ಡೆತವ್ಕೆ ಸಿಕ್ಕಿದ್ದೇ ಚಾನ್ಸು !!

ನೆನ್ನೆ ಒಂದು ಬ್ಲಾಗ್ನಲ್ಲಿ ... ವ್ಯವಸ್ಥೆ ಬಗ್ಗೆ ಸುಮಾರು ಕಾಮೆಂಟ್ಸ್ ನಡೀತಾ ಇತ್ತು .. ಮತ್ತೆ ಈ ವ್ಯವಸ್ಥೆ ಬಗ್ಗೆ ಬರಿಯೋಕೆ ಮೂಡ್ ಇಲ್ಲ. ಅದು ಅಲ್ದೇನೆ ಪೇಪರ್ನೋರು, ಟಿವಿನೋರು "ಕುಮಾರ್ಸಾಮಿ ಜಾಮ್ " ಬಗ್ಗೆ ಸಾಕಷ್ಟು ಟ್ಯಾಲೆಂಟ್ ತೋರಿಸಿ ಆಗಿದೆ . ಅದು ಸಾಕಾಗಲ್ಲ ಅಂತ ನಮ್ ಪಕ್ಕದ ಮನೆ ಆಂಟಿ ಈ ಜಾಮ್ ಬಗ್ಗೆ ಸಾಕಷ್ಟು ಮಸಾಲೆ ಸೇರ್ಸಿ ನಮ್ ಬೀದಿಗೆಲ್ಲ ಮಂದಿಗೆಲ್ಲ ಬಾಳೆ ಎಲೆ ಹಾಸಿ ಬಡಿಸಿದ್ದು ಆಗಿದೆ .

ಆಗಲೇ ಸಾಕಷ್ಟು ಲೇಟ್ ಆಗಿತ್ತು .. ಸ್ನೇಹಿತನಿಗೆ ಒಂದು ಎಸ್.ಎಂ.ಎಸ್ . ಮಾಡ್ದೆ "got struck in bad jam.. will be late to room. prepare something to eat" " ಅದಕ್ಕವನ reply message ಹೀಗಿತ್ತು .. " oh.. bad jam.. better bring some good bread and butter while coming. i cant cook now.." ನಗು ತಡೆಯಲಾಗಲಿಲ್ಲ .. ಜೋರಾಗಿ ನಕ್ಕಿ ಬಿಟ್ಟೆ .. ಸುತ್ತಲಿನ ಜನ ನನ್ನೇ ನೋಡ್ತಾ ಇದ್ರೂ . ಎಲ್ಲಾ ಮುಖಗಳು ಸೀದಿ ಹೋದ ಬ್ರೆಡ್ ನಂತೆ ಕಂಡವು !!

ಕೊನೆಗೆ ನಾನೂ ಜಂಗ್ಲಿ ರೂಮಿಗೆ ಬಂದಾಗೆ ರಾತ್ರಿ 12.30 .. ಪಾಪ ಜಂಗ್ಲಿ ನನಗಿಂತ ಸುಸ್ತಾಗಿದ್ದ .. ದೊಡ್ಡದೊಂದು ಪ್ಲಾಸ್ಟಿಕ್ ಹೊದಿಸಿ .. ನಾನೂ ಬ್ರೆಡ್ ಹಾಗು ಮತ್ತೊಂದು ಬ್ಯಾಡ್ ಜಾಮ್ ತಿಂದು ಮಲಗಿದ್ದಾಯಿತು !!

ಬೆಳಿಗ್ಗೆ ಸ್ನೇಹಿತ ಕೇಳಿದ ಪ್ರಶ್ನೆಗೆ ತಡೆಯಲಾರದ ಸಿಟ್ಟು ಬಂದಿತ್ತು - " ಯಾವ್ ಊರಲ್ಲಿ ಟ್ರಾಫಿಕ್ ಜಾಮು..??" ..
(ಪಾಪ ಜ್ವರ ಅಂತ ಮೂರೂ ದಿನದಿಂದ ರೂಮು ಬಿಟ್ಟು ಎಲ್ಲೂ ಹೊರಗೆ ಕಾಲಿಟ್ಟಿಲ್ಲ)

Tuesday, November 18, 2008

ಹೀಗೊಬ್ಬ ಸ್ನೇಹಿತೆಯ ನೆನಪು



ಮೊನ್ನೆ ಚರಿತಾಳ ರೆಡ್ ವೈನ್ ರಾದ್ದಾಂತ ಓದಿದ ಮೇಲೆ , ಆರ್ಕುಟ್ ಎಂಬ Social Community ಯಲ್ಲಿ ನನಗಾದ ಒಂದು ಕೆಟ್ಟ ಅನುಭವವನ್ನು ಬರೀ ಬೇಕು ಅನ್ನಿಸ್ತು . ಈ ಲೇಖನ ಸ್ವಲ್ಪ ವೈಯುಕ್ತಿಕ ಅನ್ನಿಸಿದರೂ ಹೇಳಿ ಬಿಡುವ ಒಂದು ತವಕ .. ಸ್ವಲ್ಪ ತಡವಯಿತೇನೋ ಅಂತ ಅನ್ನ್ಸುತ್ತೆ

ರಾತ್ರಿ ಸುಮಾರು 11 ಗಂಟೆಯಾಗಿರಬಹುದು , ಸ್ನೇಹಿತೆ ನಳಿನಿಯ ಫೋನ್ .. " ಸಂತು ಬೇಗ ನಿನ್ ಆರ್ಕುಟ್ ಪ್ರೊಫೈಲ್ ಗೆ ಲಾಗ್ ಆಗು " ಅಂತ , ಈ ಸರೀ ರಾತ್ರಿ ನಲ್ಲಿ ಏನೇ ನಿಂದು ರಗಳೆ ಅಂತ ಕ್ಯಾತೆ ತೆಗೆದೆ . ಅದಕ್ಕವಳು ಇಲ್ಲ ಕಣೋ ನಿನ್ ಪ್ರೊಫೈಲ್ ನಿಂದ ಸಿಕ್ಕಾಪಟ್ಟೆ ಸ್ಕ್ರಾಪ್ ಬರ್ತಾ ಇದ್ದಾವೆ ", ಅವಳ ದ್ವನಿ ಸ್ವಲ್ಪ ನಡುಗುತಿತ್ತು , ಯಾಕೋ ಹೆದರಿದ್ದವಳಂತೆ ಅನ್ನಿಸ್ತಾ ಇತ್ತು . ತಕ್ಷಣ ಸ್ನೇಹಿತನ ಲ್ಯಾಪ್ಟಾಪ್ ಕನೆಕ್ಟ್ ಮಾಡಿ ನೋಡಿದಾಗ ನನಗೆ ಒಂದು ತರ ಅಸಹ್ಯ , ಲ್ಯಾಪ್ಟಾಪ್ ನ್ನು ಕುಕ್ಕಿ ಬಿಡುವಷ್ಟು ಕೋಪ ಬಂದಿತ್ತು . ನಳಿನಿಗೆ ಮತ್ತೆ ಫೋನ್ ಮಾಡ್ತೀನಿ ಅಂತ ಹೇಳಿ ಕಟ್ ಮಾಡಿದೆ . ಇಲ್ಲಿ ನಾನು ಮಾಡಿದ ಎಡವಟ್ಟು ಏನಪ್ಪಾ ಅಂದ್ರೆ , ನನ್ನ ರೂಮ್ ಹತ್ತಿರ ಇರುವ ಒಂದು ಬ್ರೌಸಿಂಗ್ ಸೆಂಟರ್ ನಲ್ಲಿ ಈ ಆರ್ಕುಟ್ ತೆಗೆದು , ಕೊನೆಗೆ ಸರಿಯಾಗಿ ಲಾಗ್ ಔಟ್ ಆಗದೆ ಹೊರ ಬಿದ್ದಿದ್ದೆ . ಇದನ್ನೇ ದುರುಪಯೋಗಪಡಿಸಿಕೊಂಡ ಕೆಲ ಕಿಡಿಗೇಡಿಗಳು ನಳಿನಿಯ ಮೆಸೇಜ್ ಬಾಕ್ಸ್ ನಲ್ಲಿ ತುಂಬ ಅಶ್ಲೀಲವಾದ ಪದಗಳನ್ನು ಬಳಸಿ ಮೆಸೇಜ್ ಮಾಡಲಾಗಿತ್ತು ... ಛೆ !! ಈಗಲೂ ನೆನೆದರೆ ತುಂಬ ಬೇಜಾರ್ ಆಗುತ್ತೆ .. ಎಲ್ಲವೂ ನನ್ನ ಬೀಜವಬ್ದಾರಿಯಿಂದ ಆಗಿದ್ದು ... ತಕ್ಷಣ ನಳಿನಿಗೆ ಫೋನ್ ಮಾಡಿದಾಗ , ಯಾಕೋ ಉತ್ತರ ಬರ್ಲಿಲ್ಲ , ಮನಸ್ಸು ಇನ್ನೂ ಹೆಚ್ಚಾಗಿ ಚದಪಡಿಸೋಕೆ ಶುರುವಾಯಿತು . ಇಲ್ಲ ಇನ್ನು ತಡಿಯೋದಿಕ್ಕೆ ಆಗೋಲ್ಲ ಗಾಡಿ ತಗೊಂಡು ನಳಿನಿ ಮನೆ ಹತ್ತಿರ ಹೊರಡಲು ಸಿದ್ಧನಾದೆ . ಅಷ್ಟರಲ್ಲಿ ನಳಿನಿಯ ಕರೆ ಬಂದು .. ನನಗೆ ಮಾತೆ ಹೊರಡಲಿಲ್ಲ , ಕೊನೆಗ ಗದ್ಗರಿಸಿ " ನಳಿನಿ .. ಗೊತ್ತಿಲ್ಲ ಕಣಮ್ಮ ಹೇಗ್ ಆಯಿತು ಅಂತ ".., ಸ್ನೇಹಿತೆ ಹೇಳಿದ್ದು ಒಂದೇ ಮಾತು " ನಂಗ್ ಗೊತ್ತು ಕಣೋ ..... ಇದು ಯಾರದೋ ಬೇರೆಯವರ ಕೆಲಸ ಅಂತ , ನೀನ್ ಯಾಕೆ ಅಷ್ಟೊಂದು ಬೇಜಾರ್ ಮಾಡ್ಕೊಳ್ತಿಯ" ಒಂದು ಕ್ಷಣ ಕಣ್ಣು ಮುಚ್ಚಿ ತೆಗೆದಾಗ ಗೊತ್ತಿಲ್ಲದೆ ಕಣ್ಣೀರು ಕೆನ್ನೆಗೆ ಇಳಿದಿತ್ತು .


ಇಂದು ನಳಿನಿ ಬದುಕಿಲ್ಲ .. ಯಾವೊದೋ ಒಂದು ದುರ್ಘಟನೆಯಲ್ಲಿ ಸ್ನೇಹಿತೆಯ ಇರುವು ಮರೆಯಾಗಿ ಒಂದು ವರ್ಷಗಳೇ ಕಳೆದು ಹೋಗಿದೆ . ನಾನು ನಳಿನಿ ಬಾಲ್ಯ ಸ್ನೇಹಿತರು , ಒಂದೇ ಕಡೆ ಓದಿದವರು .. ನಳಿನಿಗೆ ನಾರನಳ್ಳಿ ಅಂತ ಅಡ್ಡ ಹೆಸರು ನಾಮಕರಣ ಮಾಡಿದ್ದು ನಾನೇ .. ಸ್ಕೂಲ್ನಲ್ಲಿ ನಾರನಳ್ಳಿ ಹೆಸರು ಸಕತ್ ಹೆಸರು ಮಾಡಿತ್ತು. ಇನ್ನು ಅವಳ ಬಗ್ಗೆ ಹೇಳಲು ಬೇರೆಯೇ ಒಂದು ಲೇಖನ ಬರೀಬೇಕು . ಕೊನೆಗೂ ಗೆಳತಿ ನನಗೆ ಗೆಳೆತನದ ಅರ್ಥ ತಿಳಿಸಿ ಹೋಗಿದ್ದಳು . ನೆನದಾಗ ತುಂಬ ಭಾವುಕನಾಗ್ತಿನಿ ...


ಕೊನೆಗೆ ಆ ನನ್ನ ಆರ್ಕುಟ್ ಪ್ರೊಫೈಲ್ ಅನ್ನು ಡಿಲೀಟ್ ಮಾಡಿ ಹೊಸತೊಂದು ಮಾಡಿದಾಯಿತು . ಇಂದು ಈ social community ಬ್ಲಾಗ್ ಗಳು ನನ್ನ ಕಣ್ಣಿಗೆ ಮಕ್ಕಳು ಆಡುವ ಆಟದ ವಸ್ತುಗಳ ತರ ಕಾಣಿಸುತ್ತೆ . ಆಟಿಕೆಯೊಂದಿಗೆ ಹೆಚ್ಚು ಆಟ ಆಡುವ ಮನಸ್ಸು ಈಗ ನನ್ನಲಿಲ್ಲ .. ಅದಕ್ಕೆ ಈಗ ಈ ಬ್ಲಾಗ್ ಗಳಿಗೆ ಅಂಟಿಕೊಂಡಿದ್ದೇನೆ .

Friday, October 31, 2008

ಒಲವ ದೀಪ

ಬಾ ಗೆಳತಿ ಹಚ್ಚಿ ಬಿಡುವ ಒಲವ ದೀಪ ...

ಸಾವಿರ ಕಷ್ಟವಿರಲಿ ಒಮ್ಮೆ
ಹಚ್ಚಿ ಬಿಡುವ ಒಲವ ದೀಪ
ನೋಡಿ ಬಿಡುವ ನೀನು ನಾನು
ನಮ್ಮ ನಮ್ಮ ರೂಪವ

ನಿಜ ಗೆಳತಿ , ಗಾಢ ಕತ್ತಲೆಯನ್ನು
ಬೆಳಗುವಾಸೆಯಿಲ್ಲ
ಬೆತ್ತಲೆಯ ಸತ್ಯಗಳನ್ನು
ಹುಡುಕುವಾಸೆಯಿಲ್ಲ

ಹಚ್ಚಿ ಬಿಡುವ ಒಲವ ದೀಪ
ಪ್ರೇಮ ಧ್ಯಾನಕೆ
ಮುಗಿಯದು ನನ್ನ ಒಲವಿನ ತೈಲ
ಆರದು ಈ ಒಲವ ದೀಪ

ಬಾ ಗೆಳತಿ ಹಚ್ಚಿ ಬಿಡುವ ಒಲವ ದೀಪ ...

Thursday, October 16, 2008

ಮನಸಿಗಿಟ್ಟ ದೃಷ್ಟಿ ಬೊಟ್ಟು !

sorry ಕಣೋ , I am really sorry .. ಕೊನೆಗೂ ನೂರಾರು sorry ಗಳೊಂದಿಗೆ ಹುಡುಗ ನಕ್ಕಿ ಮೌನ ಮುರಿದದ್ದಾಯಿತು. ಬದುಕಿನ ಪ್ರತಿಯೊಂದು ತಪ್ಪುಗಳಿಗೆ ಇಂತ "sorry" ಗಳು ಎಷ್ಟರ ಮಟ್ಟಿಗೆ ಒಳ್ಳೆ Medicine ಆಗುತ್ತೆ ಅಂತ ಗೊತ್ತಿಲ್ಲ ... . "ನೀನ್ ನನ್ನ ನಿಜ್ಜ ಪ್ರಿತಿಸ್ತಿಯ" ಅನ್ನೋ Unmatured ಮಾತು, , ಬೆಂಗಳೂರಿನ ದೊಡ್ಡ ದೊಡ್ಡ ಮಾಲ್ ಗಳಲ್ಲಿ , ರೆಸ್ಟೋರೆಂಟ್ ಗಳಲ್ಲಿ ಕಳೆದು ಹೋದೊವ್ರು , I miss you lot darling ಅನ್ನೋ SMS ಗಳು, you are my sweet heart ಅನ್ನೋ ಗಂಟೆ ಗಟ್ಟಲೆ ಮಾತುಗಳು ಬರಿ ಒಂದು ತರಹ ಚಡಪಡಿಕೆ ಅನ್ನೋದು ತಿಳಿಯಿವಷ್ಟರಲ್ಲಿ - "ಆಗಿದ್ದು ಅಗೋಯಿತು ಬಿಟ್ಟಾಕು" so let the past be past, again sorry for everything. ಇಂಥ sorryಗಳು ಮನುಷ್ಯನಿಗೆ ಒಂದ್ ತರ ಡೀಫಾಲ್ಟ್.
ಎಲ್ಲವು ಮನಸ್ಸಿಗೆ ಇಟ್ಟ ಒಂದು permanent ದೃಷ್ಟಿ ಬೊಟ್ಟು !!
just damn it man !

ಕೊನೆಗೆ ಹುಡುಗ ಹೇಳಿದ್ದು ...ನೀನ್ ಮಾತ್ರ ನನಗೆ ತುಂಬ ಸ್ಪೆಷಲ್ ಕಣೇ , ನಾನ್ ನಿನ್ನ ಹೇಗೆ ಮಿಸ್ ಮಾಡ್ಕೊತೀನಿ ಅಂದ್ರೆ "ಹುಟ್ಟಿದಾಗಿನಿಂದ ಮೈಗೆ ಅಂಟಿ ಬಂದ ಮಚ್ಚೆ ದಿಢೀರ್ ಅಂತ ಮಾಯವಾದ ಹಾಗೆ" ಮತ್ತೆ ಅದೇ ರೊಟೀನ್ , ಅದೇ I miss you darling SMS. ಎಲ್ಲಿಯವರೆಗೆ ಅಂದ್ರೆ ಕೊನೆಗೆ ಮನಸ್ಸಿಗೆ ಇಟ್ಟ ದೃಷ್ಟಿ ಬೊಟ್ಟು ಮಾಯವಾಗಿ ಮನಸ್ಸೇ ಒಂದ್ ದೃಷ್ಟಿ ಬೋಟ್ಟಾಗಿ sorry, sorry ಅಂತ ಹೇಳ್ತಾ ಇರುತ್ತೆ . ಎಲ್ಲವೂ ಎಷ್ಟರ ಮಟ್ಟಿಗೆ mature ಆಗುತ್ತೆ ಅಂತ ಗೊತ್ತಿಲ್ಲ ...

ಕೆಲವೊಂದು ಸಂಭಂದಗಳೇ ಹಾಗೆ ಕಂಡ್ರಿ ... ಸೆಲ್ ಫೋನ್ ಕರೆನ್ಸಿ ತರ.. ಅವಾಗವಾಗ re-charge ಮಾಡಬೇಕು .. ಇಲ್ಲ ಅಂದ್ರೆ ಬಡ್ಡಿಮಗಂದು deactive ಆಗ್ ಹೋಗ್ತವೆ ..


ಆದರೂ ಕೂಡ Albert Einstein ಹೇಳಿದ ಮಾತು ನೆನಪಿಗೆ ಬಂತು "If people are good only because they fear punishment, and hope for reward, then we are a sorry lot indeed”

ಕೊನೆಗೆ ಆಗಿದ್ದು ಅಗೋಯಿತು ಬಿಟ್ಟಾಕ್ .
so let the past be past
lets just live everything again.


ಮತ್ತೆ .. ನನ್ನ ಪಾಡಿಗೆ ನಾನು .. ಅದೇ ಮೌನ, ಬೇರೆ ಬೇರೆ ಊರುಗಳಿಗೆ ಪ್ರಯಾಣ, ಹೊಸ ಜನ, ಹೊಸ ವಾತಾವರಣ, ಹಳೇ mail box ನಲ್ಲಿ ಅದೇ forwaded mail, ಎಲ್ಲವೂ ಮನಸ್ಸಿಗೆ ಗಮ್ ಹಾಕಿದ ಹಾಗೆ.ಮತ್ತೆ ನೋಡಿದಾಗ ಮೊಬೈಲ್ ನಲ್ಲಿ 22 miss calls ... We are not responsible for someone else's paranoia ಅನ್ನೋ hi funda words ತುಂಬಿರೋ ನನ್ ಕಸ್ಟಮರ್ sms ಗಳು ಎಲ್ಲವನ್ನು ಮತ್ತೆ re-charge ಮಾಡಬೇಕು ....
ತತ್ತೆರಿಕೆ ಮತ್ತದೇ ರಗಳೆ ...

ಯಾವೂದೂ ಕಿತ್ತೊಗಿರೂ TV Channel ನಲ್ಲಿ ಜ್ಯೋತಿಷ್ಯನೊಬ್ಬ ... ಖಂಡಿತ ಮುಂದಿನ ವರ್ಷ ನಿಮಗೆ ಮಕ್ಕಳ ಭಾಗ್ಯ ಇದೆ ಅನ್ನೋ strong comment ಕೇಳಿ ... ಮನಸ್ಸಿನಲ್ಲೇ ನಕ್ಕೊಂಡು office ಕಡೆಗೆ ಹೆಜ್ಜೆ ಹಾಕಿದ್ದಾಯಿತು...

ನನಗೂ ಒಂದು Destiny Prediction ಬೇಕಾಗಿದೆ .. ಹಳೆ SMSಗಳ ನೆನಪು ಸಕತ್ ಕಾಟ ಕೊಡ್ತಾ ಇವೆ ...

Thursday, September 25, 2008

ನಮ್ ಮನೆ

ಮೈಸೂರಿಂದ ಸುಮಾರು ೫೫ ಕಿ. ಮೀ ದೂರದಲ್ಲಿರುವ ಚಾಮರಾಜನಗರದಲ್ಲಿ (ಈಗ ಪ್ರತ್ಯೇಕ ಜಿಲ್ಲೆ) ನಮ್ ಮನೆ ಇದೆ , ನೀವು ಅಂದುಕೊಳ್ಳಬಹುದು ಅದೇನು ದೊಡ್ಡ ವಿಷಯ ಅಂತ, ಎಲ್ಲಾರ್ ಮನೇನು ಒಂದಲ್ಲ ಒಂದು ಊರಲ್ಲಿ ಇದ್ದೆ ಇರುತ್ತೆ. ಆದ್ರೆ ನಮ್ ಮನೆ ಈ ಭೂಮಿ ಮೇಲಿರೋ ಎಲ್ಲಾ ಮನೆಗಳಿಗಿಂತ ತುಂಬ ಸ್ಪೆಷಲ್. ಅಲ್ಲಿ ನನ್ ಅಣ್ಣ ಜಯದೇವ್ ಇದ್ದಾರೆ , ನಿಮಗೆ ಗೊತ್ತಿರ್ಲಿಕ್ಕಿಲ್ಲ ಅವ್ರು ರಾಷ್ಟ್ರ ಕವಿ ಜಿ . ಎಸ್ . ಶಿವರುದ್ರಪ್ಪ ಅವರ ಮಗ . ಅಂದ ಹಾಗೆ ನಮ್ ಮನೆ ಹೆಸರು "ದೀನಬಂಧು" ಮೊದಲು ನಮ್ ಅಣ್ಣ ನಾವು ನಾಲ್ಕು ಮಕ್ಕಳಿಗೆ ಮಾತ್ರ ಅಣ್ಣ ಆಗಿದ್ರು ಈಗ ಐವತ್ತು ಮಕ್ಕಳಿಗೆ ಅಣ್ಣ ... ದೀನಬಂಧು ಒಂದು ಮಕ್ಕಳ ಮನೆ , ನಾನು ಬೆಳದ ಮನೆ ಅನ್ನುವುದಕ್ಕಿಂತಲೂ ಬದುಕಲು ಕಲಿಸಿದ ಮನೆ ಅನ್ನಬಹುದು.

ಅಣ್ಣನ ಎದೆ ಮೇಲೆ ತಲೆಯೊಡ್ಡಿ ಚಂದಮಾಮನ ಕಥೆ ಕೇಳಿದ್ದು , ಅದೇ ಅಣ್ಣನ ಜೇಬಿನಿಂದ ಹಣ ಕದ್ದು ಬಾಸುಂಡೆ ಏಟು ತಿಂದು ಊಟ ಮಾಡದೆ ಮಲಗಿದಾಗ , ಅಣ್ಣ ಮತ್ತೆ ಎಬ್ಬಿಸಿ ಮುದ್ದು ಮಾಡಿ ಊಟ ಮಾಡಿಸಿದ್ದು ನೆನಪಾದಗೆಲ್ಲ ಬಾಯಲ್ಲಿನ ಎಂಜಲು ಗಂಟಲೊಳಗೆ ಇಳಿಯಲು ತಿನುಕ್ಕಾಡುತ್ತದೆ. ನೆನಪುಗಳೇ ಹಾಗೆ "ಈಗ ತಾನೆ ಯಾರೂ ಪಕ್ಕದಲ್ಲಿ ಕೂತು ಎದ್ದು ಹೋದ ಹಾಗೆ"

ರೇಡಿಯೋದಲ್ಲಿ "ಜ್ಯೋತಿ ಕಲಶ ವಿಠ್ಠಲ" ಹಾಡು ಬರುತ್ತಿದೆ ...ಅಣ್ಣ ತುಂಬ ಇಷ್ಟ ಪಟ್ಟು ಕೊಳಲಿನಲ್ಲಿ ನುಡಿಸುತಿದ್ದ ಹಾಡು ಅದು (ಯಾವ ರಾಗ ಅಂತ ಸರಿಯಾಗಿ ಗೊತ್ತಿಲ್ಲ), homesick ಸಿಕ್ಕಾಪಟ್ಟೆ ಕಾಡ್ತಾ ಇದೆ ಕಂಡ್ರಿ .. ಒಂದ್ ವಾರ ಆಫೀಸಿಗೆ ರಜೆ ಹಾಕಿ ಮನೆಗೆ ಹೊರಟಿದ್ದೀನಿ .. ಹಳೆ ನೆನಪುಗಳನ್ನು ಕೆದಕಲು .. ನಮ್ ಮನೆ , ನಮ್ ಅಣ್ಣನ ನೋಡೋ ಆಸೆ ಇದ್ರೆ ಖಂಡಿತ ನನ್ ಜೊತೆ ಬನ್ನಿ .....

Wednesday, September 24, 2008

ನೆನಪಿನ ಕಂತೆಯಲ್ಲೊಂದು

ಕಾಲೇಜಿನಲ್ಲಿ ಗೆಳೆಯರು ಸಿನಿಮಾಕ್ಕೆ ಕರೆದಾಗ ಇಲ್ಲದ ಕಾರಣವೊಡ್ಡಿ ತಪ್ಪಿಸಿದ್ದೆ , ಎಷ್ಟೋ ಮದ್ಯಾನದ ಊಟದ ಬದಲು ಬನ್ನು, ಟೀ repace ಮಾಡಿದ್ದಿವೆ , ಅಂಗಡಿಯಲ್ಲಿ ಕೊಂಡು ತಂದ ಒಂದು lifebuoy ಸೋಪನ್ನು ತುಂಡು ತುಂಡು ಮಾಡಿ ಮೂರೂವರೆ ತಿಂಗಳು ಬಳಸಿದ್ದಿದೆ .. ಈಗಲೂ ನೆನೆಪಿದೆ , ನನ್ನಲಿದ್ದದ್ದು ನಾಲ್ಕು ಪ್ಯಾಂಟು ಮತ್ತು ಮೂರೂ ಶರ್ಟು , ಎರಡು ಪ್ಯಾಂಟಿಗೆ ಜಿಪ್ ಸರಿ ಇರ್ಲಿಲ್ಲ ..

ಇನ್ನು ಪ್ರತಿ ಶನಿವಾರ ಮತ್ತು ಭಾನುವಾರ ಯಾದವಗಿರಿ ರಾಮಕೃಷ್ಣ ಆಶ್ರಮಕ್ಕೆ ಹಾಜರ್ ಖಂಡಿತ ಧ್ಯಾನ ಮಾಡ್ಲಿಕ್ಕೆ ಹೋಗ್ತಾ ಇರ್ಲಿಲ್ಲ , ಭಾನುವಾರ ರುಚಿಯಾದ ಅಡುಗೆ ಮಾಡ್ತಿದ್ರು with fruit salad . ಅಲ್ಲೊಬ್ಬರು ಸ್ವಾಮೀಜಿ ಜೊತೆ ದೇವ್ರು ಇಲ್ಲ ಅಂತ ವಾದ ಮಾಡಿ ದೊಡ್ಡ್ ಸ್ವಾಮೀಜಿ ಹತ್ರ ಬೈಸಿಕೊಂಡದ್ದು ಮರಿಯೋಕೆ ಸಾದ್ಯ ಇಲ್ಲ , ಆಶ್ರಮದಲ್ಲಿದ್ದ ಸೈಕಲ್ ನಂದೇ ಆಗಿತ್ತು ....ಯಾವ ಕಂಪನಿ ಸೈಕಲ್ ಅಂತ ಕೇಳ್ ಬೇಡಿ ... ಹ್ಯಾಂಡ್ ಲ್ಲು , ಪೆಡಲ್ ಎಲ್ಲಾ ಬೇರೆ ಬೇರೆ ಕಂಪನಿದು ... ಒಂದ್ ತರ crossbreed .. ನಾನ್ ಅದಕ್ಕೆ ಕರಿ ಪೇಯಿಂಟ್ ಹೊಡ್ತು ಕರಿಯ ಅಂತ ಹೆಸರು ಕೊಟ್ಟಿದ್ದೆ ... ದಾರಿನಲ್ಲಿ ಹೋಗಬೇಕಾದರಂತು ವಿಚಿತ್ರ ಸೌಂಡು ..ಥೇಟ್ ಅಲ್ಲೊಬ್ರು ಸ್ವಾಮೀಜಿ ಗೊರಕೆ ಸೌಂಡ್ ತರ . ಎಷ್ಟೋ ಸಲ Mysore to Nanjangud ಅದೇ ಸೈಕಲ್ ನಲ್ಲಿ ಹೋಗಿದೀನಿ ... ಹುಚ್ಹಂತರ ಆ ಸೈಕಲ್ ಜೊತೆ ಮನಸ್ಸಿಗೆ ಬಂದದ್ದು ಮಾತಾಡಿದ್ದೀನಿ .

ನಿಜಕ್ಕೂ ಅದು ನನ್ನ ತಾಳ್ಮೆಯ ದಿನಗಳು , ಜೇಬಿನಲ್ಲಿ ಐದು ರುಪಾಯೀ ಇದ್ರೆ ಕೊನೆ ಪಕ್ಷ ಒಂದು ತಿಂಗಳು ಇಟ್ಟಿ ಕೊಳ್ತಾ ಇದ್ದೆ .. ಆದ್ರೆ ಇವತ್ತು ಒಂದ್ ಮೊಬೈಲು ಸಾಕಾಗಲ್ಲ ಅಂತ ಇನೊಂದು , ಅಂಗಡಿ ಮುಂದೆ ಕಾಣುವ ಕಂಡ ಕಂಡ ಶರ್ಟು ಪ್ಯಾಂಟು ತಗೊಂಡು ಬೀರುನಲ್ಲಿ stock ಆಗಿ ಒಗಿಯೋಕೆ ಆಗದೇನೆ ತುಂಬಿ ಹೋಗಿದೆ , ನಿಜಕ್ಕೂ ಮತ್ತೆ ಆ ತಾಳ್ಮೆಯ ದಿನಗಳಿಗೆ ಮರಳ ಬೇಕು ಅನ್ನಿಸುತ್ತದೆ ..!!!

ಗಾಂಧಿ ಹೇಳಿದ ಮಾತು ಸತ್ಯ " ಅಗತ್ಯಕಿಂತ ಹೆಚ್ಚಾಗಿ ಸಂಗ್ರಹಿಸುವುದು ಒಂದು ತರಹದ ಕಳ್ಳತನ" ....ಪ್ರಯತ್ನವೊಂತು ನಡೀತಿದೆ ......

Tuesday, September 23, 2008

Quality ಬದುಕು ಅದಕ್ಕೊಂದು Acknowledgement

ಎಷ್ಟೂ ಜನ ಜೀವನದಲ್ಲಿ ಬರುವ ಸಣ್ಣ ಸಣ್ಣ ಆನಂದವನ್ನು ಮರೆತಿರುತ್ತಾರೆ , ಸುಮಾರು ದಿನಗಳ ನಂತರ ಮಳೆ ಬಂದಾಗ ಗಮ್ಮ್ ಎನ್ನುವ ಮಣ್ಣಿನ ಸುವಾಸನೆ ಸವಿಯಲು ಮರೆತಿರುತ್ತಾರೆ , ಸಣ್ಣ ಮಗುವೊಂದು ನಮ್ಮನು ನೋಡಿ ನಿಷ್ಕಲ್ಮಶ ನಗೆ ಬೀರಿದಾಗ ಮನ್ನಸ್ಸು ಅರಳದೆ ಆಕಾಶ ತಲೆ ಮೇಲೆ ಬಿಟ್ಟವರ ಹಾಗೆ ಯೋಚನೆ ಮಾಡುತ್ತಾ ಹೊರಟಿರುತ್ತಾರೆ , ಕೊನೆಗೆ ಅವರಿಗೆ ಒಂದೊಳ್ಳೆ ಪುಸ್ತಕ , ಹಾಡು, ಸಂಗೀತ ಯಾವುದು ರುಚಿಸುವುದಿಲ್ಲ . ಅಂತವರು ಬಾಯಿ ಬಿಟ್ಟರೆ ..."ಬಿಡು ಗುರೂ ಕೊನೆವರಗೂ ಗೂಟ ಹೊಡ್ಕೊಂಡ್ ಇರ್ತಿವ ", "ಓದಿ ಯಾರ್ ಉದ್ದಾರ ಆಗಿದ್ದರೆ ಬಿಡು ಗುರು" ಇರೋವರ್ಗೂ life enjoy ಮಾಡಬೇಕು ....

ನಿಜ life enjoy ಮಾಡಬೇಕು .. ರಾತ್ರಿ ಆಯಿತು ಅಂದ್ರೆ ಕಂಠ ಪೂರ್ತಿ ಕುಡ್ತು, ದಾರೀಲಿ ಸಿಕ್ಕ ಮಾಂಸ ತಿಂದು ಯಾವುದೋ ಹೆಣ್ಣಿನ ಹಿಂದೆ ಹೋಗುವ ತಲೆ ಮಾಸಿದವನು ಅವನದೇ ಆದ ಶೈಲಿನಲ್ಲಿ life enjoy ಮಾಡ್ತಾ ಇರ್ತಾನೆ , ಹೊತ್ತಿಗೆ ಮುಂಚೆ ಮನೆ ಸೇರಿ ಒಂದಷ್ಟೊತ್ತು TV ನೋಡಿ , ಪುಸ್ತಕ ಓದಿ , ಮಕ್ಕಳಿಗೆ ಚಂದ ಮಾಮ ನ ಕಥೆ ಹೇಳ್ತಾ ಊಟ ಮಾಡೋವ್ನು ಅವನದೇ ಶೈಲಿನಲ್ಲಿ life enjoy ಮಾಡ್ತಾ ಇರ್ತಾನೆ , ಇವನಿಗೆ ಲೈಫ್ ನಲ್ಲಿ ಸಿಗೋ Acknowledgement ಅಂದ್ರೆ ಬದುಕುವ ಹುಮ್ಮಸ್ಸು ..ಅದೇ ಆ ತಲೆ ಮಾಸಿದವನಿಗೆ ಸಿಗೋದು ..30 ವರ್ಷಕ್ಕೆನೆ ಗೂಟ ಕಿತ್ಕೊಂಡು ಹೋಗೋದು , ಬದುಕು ಇದಲ್ಲ ..ಒಳ್ಳೆಯ quality ಬದುಕು ಬಾಳಬೇಕು ..ನಿಜ ಒಂದೇ ದಿನದಲ್ಲಿ ಇಡೀ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಸಾದ್ಯ ಇಲ್ಲ ... ಪ್ರತಿ ದಿನದ resolution ಗಳು , ಹೊಸ ನಿರ್ಧಾರಗಳು ನೂತನ ಬದಲಾವಣೆಯತ್ತ ಕೊಂಡೊಯ್ಯ ಬೇಕು ...ಪ್ರತಿ ದಿನದ ಆಲೋಚನೆಗಳು ಹೊಸತಗಿರಬೇಕು .. ಬದಲಾಗಬೇಕು , ನಮಗೋಸ್ಕರ ಬದಲಾಗಬೇಕು ...

Sunday, September 21, 2008

ಹೀಗೊಂದು ಕಳಕಳಿ


"ದಾರಿಯಲ್ಲಿ ಸಿಕ್ಕ ಐದು ಡಾಲರ್ ಗಿಂತ ಸ್ವಂತವಾಗಿ ಸಂಪಾದಿಸಿದ ಒಂದು ಡಾಲರ್ ಬೆಲೆ ಜಾಸ್ತಿ ಎಂದು ಕಲಿಸಿರಿ , ಶಾಲೆಯಲ್ಲಿ ನಪಾಸಗುವುದು ಮೋಸ ಮಾಡುವುದಕ್ಕಿಂತಲೂ ಹೆಚ್ಚು ಗೌರವವಾದದ್ದು ಎಂದು ಭೋದಿಸಿ , ಎಲ್ಲರೂ ಅವನ ಅಭಿಪ್ರಾಯಗಳು , ಕಲ್ಪನೆಗಳು ತಪ್ಪೆಂದು ಹೇಳಿದರೂ ಅದರ ಬಗ್ಗೆ ನಂಬಿಕೆ ಇರಿಸಿಕೊಳ್ಳಲು ತಿಳಿಸಿ "

ಈ ಮಾತನ್ನು ಅಬ್ರಹಾಂ ಲಿಂಕನ್ ತನ್ನ ಮಗನ ಶಿಕ್ಷಕನಿಗೆ ಬರೆದ ಪತ್ರವೊಂದರ ಸಾಲು , ಈಗಿನ ಮಕ್ಕಳ ಮನ ಪರಿಸ್ಥಿತಿ ಹೇಗಿದೆಯಂದರೆ ಶಾಲೆಯಲ್ಲಿ ಫೇಲ್ ಆದ ಮಾತ್ರಕ್ಕೆ ಆತ್ಮಹತ್ಯೆಗೆ ಶರಣಾಗುತ್ತಾರೆ , ಬರೀ ಫೇಲಾದ ಮಾತ್ರಕ್ಕೆ ವಿದ್ಯರ್ಥಿಯೂಬ್ಬ ಆತ್ಮಹತ್ಯೆ ಮಾಡಿಕೊಂಡ ಎಂಬ ಮಾತು ಒಪ್ಪುವಂತದ್ದಲ್ಲ , ಅವನ ಆತ್ಮಹತ್ಯೆ ಹಿಂದೆ ಅವನ ಪೋಷಕರು ಒಂದಲ್ಲ ಒಂದು ರೀತಿ ಕಾರಣರಾಗಿರುತ್ತಾರೆ, ಆತನಲ್ಲಿ ಆತ್ಮ ವಿಶ್ವಾಸವನ್ನು ತುಂಬುವಲ್ಲಿ ವಿಫಲರಾಗಿರುತ್ತಾರೆ .

ಕೆಲವು ದೇಶಗಳಲ್ಲಿ ಫೇಲ್ ಎಂಬ ಪದ ಬಳಕೆಯಲ್ಲಿಲ್ಲ ಬದಲಾಗಿ ಅದನ್ನು deffered success ಎಂದು ಕರೆಯುತ್ತಾರೆ ಅಂದರೆ ಯಶಸ್ಸನ್ನು ಮುಂದೂಡಲಾಗಿದೆ ಎಂದು ಅರ್ಥ . ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿರುತ್ತಾರೆ .Comuter, ಪ್ರತ್ಯೇಕ ಕೊಠಡಿ , ಬೈಕು , ಮೊಬೈಲು , ಜೀಬು ತುಂಬುವಷ್ಟು ಹಣ . ಹೇಗೆಂದರೆ ಒಂದು ಸುಂದರ ಹೂ ತೋಟ ಮಾಡಿ ಅದಕ್ಕೆ ಸರಿಯಾಗಿ ಕಾವಲು ಕಾಯದೆ ಬ್ಯುಸಿ ಆಗಿಬಿಟ್ಟಿರ್ತಾರೆ. ಉಸಿರು ಕಟ್ಟಿಸುವ ಸ್ಪರ್ದೆಯ ನಡುವೆ ನಗು , ಕಣ್ಣೀರು , ನೀಲಾಕಾಶ, ಬೆಟ್ಟ ಗುಡ್ಡ , ಬಳ್ಳಿ , ಹೂಗಳು ಎಲ್ಲವನ್ನು ಆ ಪುಟ್ಟ ಹುಡುಗ ಮರೆತು ತನ್ನ ಮನಸ್ಸಿಗೆ ಬೇಡವಾದ ಹಾಗು ಬಿಡಿಸಲಾಗದ ಒಂದು ತರಹನಾದ ವಿಕೃತ ಏಕಾಂತಕ್ಕೆ ಸಿಕ್ಕು ಗಾವುದ ಗಾವುದ ದೂರ ಕಳೆದು ಹೋಗಿರುತ್ತಾನೆ .

ಇಲ್ಲಿ ತಂದೆ ತಾಯಂದಿರು ಕೊಂಚ ಎಚ್ಚರವಹಸಿ ಮಕ್ಕಳೊಡನೆ time spend ಮಾಡಿದ್ದೆ ಆದರೆ ಜೀವನದಲ್ಲಿ ಎಂಥಾ ಕಷ್ಟ ಬಂದರೂ ಅದನ್ನು ಎದಿರಿಸುವ ಧೈರ್ಯ ಮತ್ತು ಆತ್ಮ ವಿಶ್ವಾಸ ಬಂದಿರುತ್ತದೆ . ಅವನು ಎಂದಿಗೂ ಉತ್ತಮ ಮತ್ತು ಆದರ್ಶ ವಿದ್ಯಾರ್ಥಿ . ಲಿಂಕನ್ನ ಮೇಲಿನ ಮಾತು ಪ್ರತಿಯೊಬ್ಬ ಪೋಷಕನಿಗೆ ಪಾಠವಾಗಬೇಕು .



(೨೦೦೬ - ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ )

Tuesday, August 19, 2008

ಅಲ್ಲಿ ಇಲ್ಲಿ ಕೇಳಿದ್ದು .. ನೋಡಿದ್ದು !!

ಕಣ್ಣು ಹೊಡೆದು propose ಮಾಡಿ ಅವಳು ಒಪ್ಪಿಕೊಂಡು ಮದುವೆ ಆದ್ರೆ ನಮ್ಮ LIC Bond ಗೋ ಅಥವ Bank A/C ಗೋ Nominee ಆಗ್ತಾಳೆ, ನಾಕ್ ಮಕ್ಳಿಗೆ ತಾಯಿನು ಆಗ್ತಾಳೆ by chance ನಸೀಬು ಮಕಾಡೆ ಮಲಿಕಂಡ್ರೆ ನಮ್ಮ E mail id ಗೆ Password ಆಗ್ತಾಳೆ ಅಥವ ಕೈ ಮೇಲೋ ಎದೆ ಮೇಲೋ ಹಚ್ಚೆ ಆಗಿ ಜೀವನ ಪೂರ್ತಿ ಕಾಡ್ತಾ ಇರ್ತಾಳೆ.....

ಎಂದೋ ಒಂದು ರಾತ್ರಿ ಸಕತ್ ನಿದ್ದೆ ಮಾಡ್ತಾ ಇರಬೇಕಾದ್ರೆ ಎದೆನಲ್ಲಿ ಜಲ್ ಅಂತ ಒಂದು alaram ಕೊಟ್ಟು ಎಬ್ಬಿಸ್ತಾಳೆ !! ಎಂದೋ ಮಾಡಿದ ಆಣೆ, ಕೊನೆವರಗೂ ನಿನ್ ಜೊತೇನೆ ಇರ್ತೀನಿ ಅಂತ ಕೊಟ್ಟ ಭಾಷೆ , ಯಾರಿಗೂ ಹೇಳಬೇಡ ಅಂತ ಹೇಳಿದ ಗುಟ್ಟುಗಳು, "loafer ನನ್ ಮಗ್ನೆ ಚಪ್ಪಲಿ ತಕೊಂಡು ಹೊಡಿತೀನಿ" ಅನ್ನೋವರ್ಗು ಹಳಸಿ ಹೋದ ಸಂಬಂಧ .. ಮತ್ತೆ ... ತಪ್ಪಾಯಿತು ಕಣೋ ಅಂತ ಅತ್ತಿದ್ದು .. ಈ ಎಲ್ಲಾ ನೆನಪುಗಳು ಬಂದಾಗ ಸುಮ್ನೆ ಒಂದು ಸಲ ನಕ್ಕು ಮತ್ತೆ ಮಲಿಕಂಡ್ರೆ ಸರಿ...ಇಲ್ಲ circleಗೆ ಹೋಗಿ ಒಂದ್ ಕ್ವಾಟರ್ ಹೊಡಿತೀನಿ ಅಂದ್ರೆ ... ನಮ್ಮಪ್ಪರಾಣೆ ಉದ್ದಾರ ಆಗಲ್ಲ !!


"Courtesy: ಸ್ವಲ್ಪ ಎಲ್ಲೋ ಓದಿದ ನೆನಪು, ಸ್ವಲ್ಪ ನಾನೆ ಸೇರಿಸಿ ಬರೆದಿದ್ದು

ಇಂತಿ ಹಳೆ Dove ಮತ್ತು ಹೊಸ Dove ಗಳ ವಿಶ್ವಾಸಿ.
ಸಂತೋಷ್
(ಎಲ್ಲದಕ್ಕೂ ಕ್ಷಮೆ ಇರಲಿ)

Monday, August 18, 2008

ಕನ್ನಡ ಬರುತ್ತಾ !!

ಗುರೂ ಕನ್ನಡ ಬರುತ್ತಾ ..!! ಬೆಂಗಳೂರಲ್ಲಿ ಸಾಮನ್ಯವಾಗಿ ಕೇಳಿ ಬರುವ ಮಾತು . ಪಾಪ ಬೆಂಗಳೂರ್ದು ಏನು ತಪ್ಪಿಲ್ಲ ಬಿಡಿ ಅಸಲಿಗೆ ಬ್ಯಾಂಗಲೋರ್ ನಾಮಪದ ಆಗಿ ಉಳ್ದಿಲ್ಲ . Bangalored = laid off due to outsourcing, outsourcing to other parts of Asia.

ಎಂ ಜಿ ರೋಡ್ ಪುಟ್ಪಾತ್ ವ್ಯಾಪಾರಿನ ಮಾತಾಡ್ಸ್ ನೋಡಿ .. ನಮಪ್ಪರಾಣೆ ಅವನ್ ಬಾಯಲ್ಲಿ ವಾಂಗೋ ಸಾರ್ ಇಲ್ಲ ರಾ ಅಂಡಿ ಅಂತಾನೆ ಮಾತಾಡ್ಸೋದು !! ಅದು ಅವನ್ ತಪ್ಪಲ್ಲ ...ಕೊನೆಗೆ ಅವನ್ ಜೊತೆ ವ್ಯಾಪಾರ ಮಾಡೋದು ಬಿಡೋದು ನಮ್ ಕರ್ಮ .
ಈಗ ಹೇಗ್ ಆಗಿದೆ ಅಂದ್ರೆ , ನಾವ್ ಯಾರ್ ಜೋತೆನಾದ್ರು ಮಾತಾಡ್ ಬೇಕು ಅಂದ್ರೆ ಮೊದಲು ಕನ್ನಡ ಬರುತ್ತಾ ಅಂತ ಕೇಳ್ತಿವಿ ...(confirm ಮಾಡ್ಕೊಂದು ...... ಆಮೇಲೆ ಮಿಕ್ಕಿದ್ದು)

ಅದೆಲ್ಲ ಬಿಡ್ರಿ ... ಒಂದ್ ವರ್ಷದ ಹಿಂದೆ ನನ್ ಫ್ರೆಂಡ್ ಒಬ್ಳಿಗೆ ಫೋನ್ ಮಾಡಿದ್ದೆ .... ಬಾಲ್ಯ ಸ್ನೇಹಿತೆ ..ತುಂಬ ಮಾತಾಡಬೇಕು ಅನ್ಕೊಂಡಿದ್ದೆ ... ಅಲ್ಲಿ ಆಗಿದ್ದೆ ಬೇರೆ ... !! ನಮಿಬ್ಬರ ಸಂಬಾಷಣೆ ಇಲ್ಲಿದೆ ನೋಡಿ ..

ನಾನು : ಹೆಲೋ ****** ನ ಮಾತಾಡ್ತಾ ಇರೋದು ...?
ಅವಳು: Yes speaking.. who is calling please
ನಾನು: ನಾನ್ ಕಣಮ್ಮ ಸಂತೋಷ್ ಮಾತಾಡ್ತಾ ಇರೋದು .. ನಿನ್ ಪ್ರೈಮರಿ ಸ್ಕೂಲ್ ಕ್ಲಾಸ್ ಮೇಟು ...
ಅವಳು: really...what a surprise santhu..oh my god i just cant beleive...how are u man..what are you doing..? where are..?
ನಾನು: ನಾನ್ ಚೆನ್ನಾಗಿದ್ದೀನಿ ...(ಇತ್ಯಾದಿ ಇತ್ಯಾದಿ..ಇತ್ಯಾದಿ..ಇತ್ಯಾದಿ..)... ನೀನ್ ಹೇಗಿದ್ದೀಯ ..ಏನ್ ಮಾಡ್ತಾ ಇದ್ದೀಯ ..?
ಅವಳು: I am find da.. i am working for ***ro (ಅರ್ಥ ಮಾಡ್ಕೊಳ್ಳಿ .. ಯಾವ ಕಂಪನಿ ಅಂತ )
ನಾನು: ಇನ್ನೇನ್ ಸಮಾಚಾರ ... ???
ಅವಳು: ohh..nothing special man, you have to tell everything.
ನಾನು: ನಂದು ಸಮಾಚಾರ ಏನು ಇಲ್ಲ ... ನಿನ್ ಮದುವೆ ಆಯ್ತಾ ..?
ಅವಳು: (ಸಣ್ಣದೊಂದು ನಗು - ಕನ್ನಡ ದಲ್ಲಿ ನಕ್ಲೋ , ಇಂಗ್ಲೀಷಲ್ಲಿ ನಕ್ಲೋ ಅಂತ ಗೋತ್ತಗ್ಲಿಲ್ಲ )..no da..still time is there for that..what about you then..?
ನಾನು: (ಸ್ವಲ್ಪ ಜೋರಾಗಿ ನಕ್ಕು ) ಇಲ್ಲ ಕಣಮ್ಮ ..ಇನ್ನು ಲೇಟು ... ಮತ್ತೆ ಯಾವಾಗ್ ಸಿಗ್ತಿಯ .. ??
ಅವಳು: oh no man..i think this month is not possible, i am going to delhi on my project work and again i am going to pattaya, planning to spend time with my mom, dad and aunt..ok santhu, i got some urgent work..will call you later..take care da..bye ok..
ನಾನು: ಓಕೆ ಕಣಮ್ಮ ಫ್ರೀ ಅದಾಗ ಫೋನ್ ಮಾಡು ... ಬೈ (ಹುಡ್ಗಿರು ಯಾವಾಗ take care ಅಂತಾರೋ ನಾವೇ ಅರ್ಥ ಮಾಡ್ಕೊಬೇಕು ...ಮಾತಾಡೋಕೆ ಟೈಮ್ ಇಲ್ಲ ಫೋನ್ ಕಟ್ ಮಾಡು ಅಂತ )
ಒಂದ್ ವರ್ಷ ಆಯಿತು , ಹುಡುಗಿ ಪತ್ತೆ ಇಲ್ಲ ...!!!



ಅಂದ ಹಾಗೆ ನಾನು ಯಾವುದೇ ಕನ್ನಡ ಸಂಘ ಪರವಾಗಿ ಹೋರಾಟ ಮಾಡ್ತಿಲ್ಲ ... !! ಎಲ್ಲಾದರು " ಕನ್ನಡ ಬರುತ್ತಾ " ಅನ್ನೋ ಶಬ್ದ ನಿಮ್ ಕಿವಿಗೆ ಕೇಳಿದ್ರೆ ... ಕನ್ನಡ ನಮ್ಮ್ ಉಸಿರು ಅನ್ನೋದನ್ನ ಮರೀಬೇಡಿ ...!!

ಇಂತಿ
ಸಂತೋಷ್
{****(ಅವಳು) ಎಲ್ಲಿ ಇದ್ದೀಯ ಅಂತ ಗೊತ್ತಿಲ್ಲ , ಕ್ಷಮೆ ಇರಲಿ , ಕ್ಸಮಿಸಿಲ್ಲ ಅಂದ್ರು ಪರವಾಗಿಲ್ಲ adjust ಮಾಡ್ಕೊತೀನಿ}

ನನ್ನ ನೋಟ್ ಬುಕ್ ನ ಕೊನೆಯ ಹಾಳೆಗಲ್ಲಿ ...

ಮಾಸ್ಟರ್ ಪಾಠ ಬೇಜಾರು ಅನ್ನಿಸಿದಾಗ , ಗೆಳೆಯನೊಡನೆ ಸೇರಿ ಚುಕ್ಕಿ ಆಟ ಆಡಿದ್ದು ಆ ನನ್ನ ನೋಟ್ ಬುಕ್ಕಿನ ಕೊನೆ ಹಾಳೆಯಲ್ಲಿ , ನನ್ನಲ್ಲಿದ್ದ ಪುಟ್ಟ ಕವಿ , ಚಿತ್ರಕಾರ ಹುಟ್ಟಿದ್ದು ಅದೇ ಕೊನೆಯ ಪುಟದಲ್ಲಿ , ಕಂಡು ಕಾಣದಂತೆ ಅವಳ ಹೆಸರು ಬರೆದದ್ದು ಅದೇ ಕೊನೆಯ ಹಾಳೆಯಲ್ಲಿ , ಯಾರಲ್ಲೂ ಹೇಳಲಾಗದ ಗುಟ್ಟನ್ನು ಹೇಳಿದ್ದು ಆ ಕೊನೆಯ ಪುಟಕ್ಕೆ. ಶಾಲಾ ದಿನಗಳು ಮುಗಿದು ಗೆಳೆಯ ಗೆಳತಿಯರ ಫೋನ್ ನಂಬರ್ , ಅಡ್ರೆಸ್ ಬರೆದಿಟ್ಟುಕೊಂಡದ್ದು ಆ ಕೊನೆಯ ಹಾಳೆಯಲ್ಲಿ .

ಕೊನೆಗೊಂದು ದಿನ ಚುಕ್ಕಿ ಆಟ ಆಡಿದ ಗೆಳೆಯ , ಅವಳ ಹೆಸರು ಬರೆದ್ದಿದ್ದ ಅವಳು , ಕವಿತೆ , ಚಿತ್ರ , ಫೋನ್ ನಂಬರ್ , ಅಡ್ರೆಸ್ ಎಲ್ಲವೂ ಮಾಯವಾಗಿದ್ದವು .. ಆ ಪುಸ್ತಕ ನೆನಪಾದಗೆಲ್ಲ ಏನೋ ಒಂದು ತರ ಬೇಜಾರು .. ಇಂದಿಗೂ ಆ ಕೊನೆ ಹಾಳೆಗಳು ಮನಸ್ಸಿನ ಮತ್ತು ಹೃದಯದ ಮೊದಲ ಹಾಳೆಯಲ್ಲಿ ಅಳಿಸಲಾಗದಂತೆ ಅಚ್ಹೊತ್ತಿವೆ ... ಆ ನನ್ನ ಪುಸ್ತಕದ ಕೊನೆಯ ಪುಟಕ್ಕಿದ್ದ ಜೀವ ಈ HP Keyboard ಗೆ ,acer TFT Monitor ಗೆ , logitech mouse ಗೆ ಖಂಡಿತ ಇಲ್ಲ........

ಇಂತಿ
ಕಳೆದು ಹೋದ ಆ ನೋಟ್ ಬುಕ್ಕಿನ ನೆನಪಿನೊಂದಿಗೆ
ಸಂತೋಷ್