Saturday, February 2, 2013

ಬ್ಯಾಂಗಲೋರ್ ಬೆಂಗಳೂರು ಆಗೈತೆ

ಬ್ಯಾಂಗಲೋರ್ ಬೆಂಗಳೂರು ಆಗೈತೆ
ಪುಟ್ಟ ಪುಟ್ಟಿಯರ ಪುಟ್ಟ ಪದ್ಯದ ಮ್ಯಾಗೆ ಹ್ಯಾರಿ ಪೊಟ್ಟರ್ ಕುಂತೈತೆ
ಅವ್ವಂದಿರ ಬಾಯಲ್ಲಿ ಈಳಿಗೆ ಮಣೆ ರುಬ್ಬೋ ಕಲ್ಲು ಮರ್ತೊಗೈತೆ

ಇಂಗ್ಲೀಸು ಬರಾಕಿಲ್ಲ ಅಂದ್ರೆ ಅಪ್ಪ ಜಡ್ ಜಡಿಕಂಡು ಹೊಡಿತಾನೆ
ಸಾಲೆನಾಗೆ ಇಂಗ್ಲಿಸ ಮಾತಾಡಕಿಲ್ಲ ಅಂದ್ರೆ ಮೆಡುಂಮ್ಮೊರು ದಂಡ ಕಟ್ಟು ಬಡ್ಡೆದ್ನೆ ಅಂತಾಳೆ
ಅವಲಕ್ಕಿ ಪವಲಕ್ಕಿ ಅಂತಿದ್ದ ಪುಟಾಣಿ ಬಾಯ್ನಾಗೆ ಲವ್ ಡವ್ ತುಂಬೈತೆ

ಪಟ್ಟಣದ ಹುಡ್ಗಿಗೆ ಗೊತ್ತಿಲ್ಲಪ್ಪೋ ನಂ ಸಾಲ್ ಮರದ ತಿಮ್ಮಕ್ಕ
ಗೊತ್ತಿದ್ರೆ ಗೊತ್ತಿರ್ತೈತೆ ಐಸ್ವರ್ಯ ರೈ ಅವಳ್ ಅವ್ವುನ್ನ್ ಹೆಸ್ರು
ಇಲ್ಲ ಅಂದ್ರೆ ಅವಳ್ ಸಾಕೋ ನಾಯಿ ಹೆಸ್ರು
ಹುಟ್ಟಿದ್ದು ಯವುರಮ್ಮಿ ಅಂದ್ರೆ ಬ್ಯಾಂಗಲೋರ್
ಬ್ಯಾಂಗಲೋರ್ ಬೆಂಗಳೂರು ಆಗೈತೆ

ನಾಲಗೆ ಸೀಳ್ಸಿ ಬಾಯಿ ಹೊಲ್ಸಕಿದ್ರುನು ಮೂಗ್ನಾಗೆ ಕನ್ನಡ ಪದ್ವಾಡ್ತೀನಿ
ಅಂತಿದ್ದ ರತ್ನನ್ ಪರ್ಪಂಚ್ ದಾಗೆ ಉಸಿರ್ರ್ ಕೊಡೊ ಗಾಳಿನೇ ಇಂಗ್ಲಿಸ್ ಆಗೋದ್ರೆ ಎಂಗಅಣ್ಣ
ಬರ್ರಲ ಕನ್ನಡ ಬರದವರಿಗೆ ಕನ್ನಡ ಕಲ್ಸವ
ಬ್ಯಾಂಗಲೋರ್ ಬೆಂಗಳೂರು ಆಗೈತೆ

ಮತ್ತೊಂದಷ್ಟು ನೆನಪುಗಳು !!


ಓಕುಳಿ

ಕಾಮನಬಿಲ್ಲಿಗೂ ಬಣ್ಣ ಹಚ್ಚಿ
ಭೂಮಿಗಿಳಿಸಿ ನಿನ್ನೊಡನೆ
ಒಕುಳಿಯಾಡುವ ಆಸೆ.

*******
ಕನಸು

ನಾವಿಬ್ಬರೂ ಕೂಡಿಟ್ಟ ಕನಸುಗಳನ್ನು
ನಿನ್ನ ಮುಂದೆ ಹೊತ್ತು ತಂದಾಗ
ನೀ ಬೇರೊಬ್ಬರಿಗೆ ಮಾರಿದ್ದು ಸರಿಯೇ ?

*******
ಕೊಳಲು

ಹೃದಯ ಕೊಳಲನು ನೀನೆ ಕೊಟ್ಟೆ
ನಾನು ನುಡಿಸಿದೆ
ಹೊರ ಬಂದ ಬಿಸಿ ಉಸಿರ ರಾಗಗಳಲ್ಲಿ
ನೀನಿರುವುದೇ ಮರೆತೇ ಹೋಗಿತ್ತು ಗೆಳತಿ !

*******
ಸಂತೆ
ಸದ್ದಿಲ್ಲದ ಸಂತೆಯಲಿ
ನಿನ್ನ ಹೆಜ್ಜೆ ಸದ್ದು
ಕೆಳುವುದರವೊಳಗಾಗಿ
ಸಂತೆಯಲ್ಲಿ ಚಿಂತೆ ಶುರುವಾಗಿತ್ತು !

Monday, April 23, 2012

ಪದಬಂಧ

ಪದಬಂಧ ಆಟದಲ್ಲಿ ಪೆನ್ನಿನ ತುದಿಯಲ್ಲಿ
ಸಿಕ್ಕಿ ಹೊರ ಬರಲಾರದೆ ಒದ್ದಾಡುತ್ತಿರುವ 
ಪದದಲ್ಲಿ ನೀನು ಇರುವೆಯೆಂದು ತಿಳಿದು
ಮತ್ತಷ್ಟೂ ಗೋಜಲು ಸಂಕಷ್ಟಕ್ಕೆ ಸಿಲುಕಿ 
ನಿನ್ನ ಆಚೀಚಿನ ವಿನ್ಯಾಸಕ್ಕೆ 
ತಪ್ಪು ಹೊಂದಿಕೆಯಾದೀತೆಂಬ ಭಯದಲ್ಲಿ
ಪೆನ್ನಿನ ಮೊನೆಯಲ್ಲಿಯೇ ಹೊರಬರಲಾರದೆ
ಮರುಹೊಂದಾಣಿಕೆ ಮಾಡುವ ಹವಣಿಕೆಯಲ್ಲಿ
ಕಾದು ಹೊಂಚು ಹಾಕುತ್ತಿರುವ ಪದಗಳೆಷ್ಟೋ !!
____________________________________________

ಲಲನಾನಾದ

ಬ್ರಿಗೆಡ್ ರೋಡಿನಲ್ಲಿ 
ಸಣ್ಣ ಸಣ್ಣ ಸ್ಕರ್ಟ್ ತೊಟ್ಟ 
ಲಲನೆಯರ ಲಲನಾನಾದ
ಪೋಲಿ ಮನಸಿಗೆ ಕೊಂಚ  
ಆಹ್ಲಾದತೆ ಕೊಟ್ಟಿದ್ದೇನೂ ನಿಜವೆಂದು
ಹೆಂಡತಿ ಮುಂದೆ ಒಪ್ಪಿಕೊಂಡ ಮೇಲೆ 
ಮೊದಲು ಈ ಆಫೀಸ್ ಬಿಡು
ಇಲ್ಲ root change ಮಾಡೆಂದು
ಕೂತಿದ್ದಾಳೆ..!!

Monday, March 19, 2012

ಅಮೇಲಿಯ ಅಮಲಿನಲ್ಲಿ..!



ಕೆಲವೊಂದು ಸಿನಿಮಾಗಳು ಮಾತ್ರ ನಮ್ಮ ಹೃದಯಕ್ಕೆ ಲಗ್ಗೆ ಇಡುವಲ್ಲಿ ನೋಡುವಲ್ಲಿ ಯಶಸ್ವಿ ಆಗುತ್ತವೆ, ಆ ತರಹದ ಸಿನಿಮಾ ಸಾಲಿಗಿ ಸೇರಬಹುದಾದ ಚಿತ್ರ ಅಮೆಲಿ ! ಈ ಫ್ರೆಂಚ್ ಸಿನಿಮಾ ಮನಸಿಗೆ ಮುದ ನೀಡುವುದಷ್ಟೇ ಅಲ್ಲದ್ದೆ ನಿಮ್ಮ ಹೃದಯಕ್ಕೆ ತುಂಬಾ ಹತ್ತಿರವೆನಿಸುತ್ತದೆ. ಶುರುವಿನಿಂದ ಕೊನೆಯವರೆಗೂ ಒಂದೇ ಓಘವನ್ನು ಉಳಿಸಿಕೊಂಡು ನಿಮ್ಮನ್ನು ಹೇಳಿಕೊಳ್ಳಲಾಗದ ಚಿಂತನೆಗೆ ಹಚ್ಚುತ್ತದೆ . ನಟಿ ಅಡ್ರೆ ಜುಸ್ಟೀನ್ ಅಮೆಲಿಯ ಪಾತ್ರದಲ್ಲಿ ಮತ್ತು ನಿರ್ದೇಶಕ ಜಾನ್ ಪೀರ್ ರ ಪ್ರತಿಭೆಯನ್ನು ಭಟ್ಟಿಯಿಳಿಸಿದ ಪರಿಮಳ ಪ್ರತಿ ಫ್ರೇಮ್ ಮೂಲೆ ಮೂಲೆಯಲ್ಲೂ ಕಾಣಬಹುದು, ನಿರ್ದೇಶಕರು ಇಡೀ ಸಿನಿಮಾವನ್ನು ಸೆಪಿಯಾ ಮತ್ತು ಹಸಿರು ಬಣ್ಣದಲ್ಲಿ ಅದ್ದಿ ತೆಗದಂತಿದೆ. ನಿರ್ದೇಶಕರು ಚಿತ್ರದಲ್ಲಿ ಸ್ಪೆಷಲ್ ಎಫೆಕ್ಟ್ ಗಳಿಂದ ತಮ್ಮದೇ ಆದ ಪ್ಯಾರಿಸ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆಗೊಮ್ಮೆ ಈಗೊಮ್ಮೆ ಬರುವ ಹಾಸ್ಯ ಕಥೆಯೊಳಗಿನ ಪ್ರಮುಖ ಭಾಗವೆನಿಸುವುದು ಸಿನಿಮಾದ ಹೆಗ್ಗಳಿಕೆ.





ಅವಳ ಹೆಸರು ಅಮೆಲಿ ಪೌಲಿನ್, ಅಮೆಲಿಯ ತಂದೆ ಒಬ್ಬ ಮಿಲಿಟರಿ ವೈದ್ಯ ನಾಗಿರುತ್ತಾನೆ ಬಾಲ್ಯದಲ್ಲಿ ಅಮೆಲಿಯ ಹೃದಯ ಬಡಿತ ಹೆಚ್ಚಗಿರುವುದೆಂದು ಮತ್ತು ಹೃದಯದ ತೊಂದರೆಯಿದೆಯೆಂದು ಭಾವಿಸಿ ಅವಳನ್ನು ಸ್ನೇಹಿತರೊಡನೆ ಬೆರೆಯಲು ಬಿಡದೆ ಅವಳಮ್ಮ ಮನೆಯೇಲ್ಲಿಯೇ ಪಾಠ ಹೇಳಿಕೊಡುತ್ತಾಳೆ . ಹೀಗೆ ಹೊರ ಪ್ರಪಂಚದ, ಸ್ನೇಹಿತರ ನಂಟಿಲ್ಲದೆ ಇಲ್ಲದೆ ಬೆಳದ ಅಮೆಲಿ ತುಂಬಾ ಮುಗ್ಧೆಯಾಗಿರುತ್ತಾಳೆ.

24 ರ ಹರೆಯದ ಅಮೆಲಿ ಕಾಫೀ ಶಾಪ್ ಒಂದರಲ್ಲಿ ಪರಚಾರಕಿಯಾಗಿ ಕೆಲಸ ಮಾಡುತ್ತಿರುತ್ತಾಳೆ , ಅಲ್ಲಿ ಅಮೆಲಿಗೆ ಹೊರಗಿನ ಪ್ರಪಂಚ ಪರಿಚಯವಾಗ ತೊಡಗುತ್ತದೆ. ಅಮೆಲಿಗೆ ಎಲ್ಲವೂ ಹೊಸದು, ಕೆಲವೊಮ್ಮೆ ವಿಚಿತ್ರ, ಎಲ್ಲವನ್ನು ತನ್ನ ಒಡಲಲ್ಲಿ ಹಿಡಿಯುವ ಹಂಬಲ.,ಅವಳು ಸಿನಿಮಾ ನೋಡುವ ರೀತಿಯೇ ಬೇರೆ , ಥಿಯೇಟರ್ ನಲ್ಲಿ ಕೂತು ಹೀಗೆ ಹೇಳುತ್ತಲೇ - I like to look for things no one else catches. I hate the way drivers never look at the road in old American movies, ಕೆಲವೊಮ್ಮೆ ಅಮೆಲಿಗೆ ಪ್ರಪಂಚದಲ್ಲಿ ಈ ಕ್ಷಣ ಎಷ್ಟು ಜನಕ್ಕೆ ಸಂಬೋಗದ ಪರಾಕಾಷ್ಟೆ ಉಂಟಾಗಿದೆ ಎಂದು ತಿಳಿಯುವ ಹಂಬಲ, ಹೀಗೆ ಅಮೇಲಿಯ ತುಂಟಾಟಿಕೆ ನಿಮ್ಮನ್ನು ಮುಜುಗರಕ್ಕೆ ನೂಕಿದರೂ ಅವಳ ಹೊಳೆಯುವ ಕಣ್ಣುಗಳು, ಸದಾ ಒಪ್ಪವಾಗಿ ಬಾಚಿದ ಆಕೆಯ ಕೂದಲು, ನಕ್ಕಾಗ ಗುಳಿ ಬೀಳುವ ಕೆನ್ನೆ ಖಂಡಿತ ನಿಮ್ಮನ್ನು ಸಮ್ಮೋಹನಕ್ಕೆ ಒಳಪಡಿಸುತ್ತದೆ.


ಹೀಗೊಂದು ದಿನ ಅಮೆಲಿ ತಾನು ವಾಸಿಸುತ್ತಿದ್ದ ಮನೆಯಲ್ಲಿ ಇದರ ಹಿಂದೆ ಇದ್ದ ವಾಸವಿದ್ದ ಬಾಡಿಗೆದಾರ ಮಗುವೊಂದು ಸಿಗಾರ್ ಬಾಕ್ಸ್ ನಲ್ಲಿ ಅಡಗಿಸಿಟ್ಟಿದ್ದ ಆಟಿಕೆಗಳು ಸಿಗುತ್ತದೆ , ಅದು ಬಹುಷಃ ನಲವತ್ತು ವರ್ಷ ಹಳೆಯಾದ್ದಾಗಿರಬಹುದು. ಈಗ ಅಮೆಲಿಗೆ ಹೇಗಾದರೂ ಮಾಡಿ ಈ ಆಟಿಕೆಗಳನ್ನು ಅದರ ಮಾಲೀಕರಿಗೆ ತಲುಪಿಸುವ ಹಂಬಲ, ಅವಳು ತನ್ನೆಲ್ಲ ಸಮಯವನ್ನು ಆಟಿಕೆಯ ಮಾಲೀಕನನ್ನು ಹುಡುಕುವುದಕ್ಕೆ ಮೀಸಲಿಡುತ್ತಾಳೆ, ಕೊನೆಗೂ ಅಮೆಲಿ ತನ್ನನ್ನು ಗುರುತಿಸಿಕೊಳ್ಳದೆ ಆತನನ್ನು ಹುಡುಕಿ ಅದನ್ನು ತಲುಪಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ತನ್ನ ಬಾಲ್ಯದ ನೆನಪು ಸಿಕ್ಕ ಖುಷಿಯಲ್ಲಿ ಆ ಮನುಷ್ಯ ಮತ್ತೆ ಮಗುವಾಗಿ ಆನಂದ ಪಡುತ್ತಾನೆ. ಅವನ ಸಂತೋಷವನ್ನು ನೋಡಿದ ಅಮೆಲಿ ಮತ್ತೊಬ್ಬರು ಕಳೆದುಕೊಂಡ ಚಿಕ್ಕ ಚಿಕ್ಕ ಸಂತೋಷಗಳನ್ನು ಹುಡುಕಿಕೊಡುವ ನಿರ್ಧಾರ ಮಾಡುತ್ತಾಳೆ. ಕುರುಡನಿಗೆ ಇಡೀ ಊರ ಅಸ್ತಿತ್ವವನ್ನು, ಪರಿಮಳವನ್ನು ಪರಿಚಯ ಮಾಡಿಸಿಕೊಡುತ್ತಾಳೆ, ತನ್ನ ಸಹೋದ್ಯೋಗಿಗೆ ಆಕೆಯ ಪ್ರೀತಿಯನ್ನು ತೋರಿಸಿಕೊಡುತ್ತಾಳೆ, ಗಂಡನನ್ನು ಕಳೆದು ಕೊಂಡವಳೋಬ್ಬಳಿಗೆ ಸಂತ್ವಾನ ನೀಡುತ್ತಾಳೆ. ಇಲ್ಲಿ ಅಮೆಲಿ ಯಾವುದೇ ಢಾಂಬಿಕತೆಗೆ , ಒಣಜಂಭಕ್ಕೆ , ಪ್ರಚಾರಕ್ಕೆ ಹಪಿಸುವುದಿಲ್ಲ, ಅವಳಿಗೆ ಬೇಕಾಗಿರುವುದು ಇನ್ನೊಬ್ಬರ ಸಂತೋಷ, ಅವರ ಬೆಚ್ಚಗಿನ ನಗು ಮಾತ್ರ.

ಚಿತ್ರ ಮುಂದುವರಿದಂದೆ ಕೆಲವೊಂದು ಫ್ಲಾಶ್ ಬ್ಯಾಕ್ ಚಿತ್ರವನ್ನು ಚೆಲ್ಲಾಪಿಲ್ಲಿ ಮಾಡಿದನಿಸಿದರೂ ಅದು ತಾತ್ಕಾಲಿಕ ಮಾತ್ರ, ತಕ್ಷಣ ಅದರ ನಿರಂತರತೆ ಆರ್ಥವಾಗಿಬಿಡುತ್ತದೆ. ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರ "ನೀನೂ" ಈತ ಫೋಟೋ ಬೂತ್ ಗಳಲ್ಲಿ ಜನರು ಚೆನ್ನಾಗಿಲ್ಲವೆಂದುಕೊಂಡು ಬಿಸಾಡಿದ ಫೋಟೋಗಳನ್ನು ಹೆಕ್ಕಿ ಆಲ್ಬಮ್ ಮಾಡಿ ಜೋಡಿಸುವುದು ಅವನ ಹವ್ಯಾಸ. ನೀನೂ ತಾನು ಅತ್ಯಂತ ಪ್ರೀತಿಸಿದ ಆಲ್ಬಮ್ ದಾರಿಯಲ್ಲಿ ಬೀಳಿಸಿದಾಗ ಅಮೆಲಿ ಅದನ್ನು ಜೋಪಾನ ಮಾಡಿ ನೀನೂವನ್ನು ಹುಡುಕಿ ಅವನಿಗೆ ಹಿಂತಿರುಗಿಸುತ್ತಾಳೆ, ಆದರು ಅಮೇಲಿಯ ಸಂಕೋಚತನ ತನ್ನನ್ನು ಗುರುತಿಸಿಕೊಳ್ಳಲು ಬಿಡುವುದಿಲ್ಲ. ಕೊನೆಗೆ ಅಮೇಲಿಯ ವೃದ್ಧ ಚಿತ್ರಕಾರ ಸ್ನೇಹಿತ ಆಕೆಯ ಅಂಜಿಕೆ, ಸಂಕೋಚವನ್ನು ದೂರ ಮಾಡಿನಿನೂವಿನೊಂದಿಗೆ ಸೇರಲು ಸಹಾಯ ಮಾಡುತ್ತಾನೆ. ಚಿತ್ರ ಅಮೆಲಿ ಮತ್ತು ನೀನೋ ಒಂದಾಗುವುದರೊಂದಿಗೆ ಕೊನೆಯಾಗುತ್ತದೆ. ಚಿತ್ರದ ಯಾವ ಪಾತ್ರವು ಭಾವತಿರೆಕಕ್ಕೆ ಹೋಗದೆ ನಿಮ್ಮನ್ನು ಹೇಳಿಕೊಳ್ಳಲಾಗದ ಭಾವ ತುಮುಲಕ್ಕೆ ನೂಕುತ್ತದೆ. ಬ್ರುನೋರ ಛಾಯಾಗ್ರಹಣ, ಅಡ್ರೆ ಜುಸ್ಟೀನ್ ಳ ಮುಗ್ಧ ನಟನೆ ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದು ಹೋಗುತ್ತದೆ ಚಿತ್ರ ಮುಗಿದರೂ ಅಮೆಲಿಯ ಅಮಲು ನಿಮ್ಮನ್ನು ಮತ್ತೆ ಆವರಿಸಿಬಿಡುತ್ತದೆ. ಇದರ ಇಂಗ್ಲಿಷ್ ಉಪಶೀರ್ಷಿಕೆ ಕೊಂಚ ನೇರ ಮತ್ತು ಸರಾಗ ಮಾಡಿದ್ದಲ್ಲಿ ನೋಡುಗರಿಗೆ ಚಿತ್ರ ಮತ್ತಷ್ಟು ಪರಿಣಾಮಕಾರಿಯಾಗಿರುತಿತ್ತು . .

Friday, November 4, 2011

ನಿನ್ನ ಗೈರು ಹಾಜರಿಯಲ್ಲಿ

ಕನ್ನಡಿಯಲ್ಲಿ ನೀ ಅಂಟಿಸಿದ

ಬೊಟ್ಟಿನ ಬಿಂಬದಲ್ಲಿ ನೋಡಬಲ್ಲೆ ನಾ ನನ್ನನ್ನು..?
ಕನ್ನಡಿ, ಏನನ್ನು ಸ್ವೀಕರಿಸುತ್ತಿಲ್ಲ
ಏನನ್ನು ತಿರಸ್ಕರಿಸುತ್ತಿಲ್ಲ
ಎಷ್ಟೇ ಕನ್ನಡಿ ಮುಂದೆ ನಿಂತರು
ನಾನೆಂಬ ಭ್ರಮೆ ಮಾತ್ರ...
ನಿನ್ನ ಬೊಟ್ಟಿನ ಬಿಂಬದಲ್ಲಿ
ನಿನ್ನೊಂದಿಗೆ ನಾನಾಗುವ ವ್ಯರ್ಥ ಪ್ರಯತ್ನ..
ಕೊನೆಗೆ ನನ್ನ ನೋಡಿ
ಮರುಗಿ ಕಣ್ಣೀರಿಟ್ಟ ಕನ್ನಡಿ
ನೀನಂಟಿಸಿದ ಬೊಟ್ಟಿಗೆ
ಅಂಟಾಗಿರುವ ಅನುಮತಿಯ ಮೇರೆಗೆ
ನಿನ್ನ ಗೈರು ಹಾಜರಿಯಲ್ಲಿ
ನಿನಗಾಗಿ ಕಾದಿರುವ ನಾನು ಬೊಟ್ಟಿನ ಹಿಂದಿನ ಅಂಟುಕ ಮಾತ್ರ ..

Thursday, December 2, 2010

ಬಂಧಿ

ಮತ್ತೆ ನಿನ್ನ ಹೃದಯದಲ್ಲಿ ಬಂಧಿಯಾಗುವಾಸೆ

ದಯವಿಟ್ಟು ಜಾಮೀನು ಕೊಟ್ಟು

ಹೊರಗೆಳೆಯಬೇಡ ಗೆಳತೀ

ನೀನಿಲ್ಲದ ಜೈಲಿನಲ್ಲಿ ನಾನು ಇಂತಿಷ್ಟೇ.....

ಕಬ್ಬಿಣದ ಸರಳುಗಳ ಮಧ್ಯೆ

ಬಿಗಿ ಉಸಿರಿಡಿದು ನೀರವತೆ ಪಹರೆಯಲಿ

ಮುಗ್ಗರಿಸಿ.. ತಬ್ಬಿರಿಸಿ..

ಮಾಸಲು ನೆನಪುಗಳನು ವಿಲೆವಾರಿಗೊಳಿಸಿ

ತಾಜಮಹಲನು ಕಟ್ಟಿ

ಆಗೊಮ್ಮ ಈಗೊಮ್ಮೆ ಬಂದು ಹೋಗುವ

ನಿನ್ನ ಬಿಸಿ ಉಸಿರ ಸೆರೆ ಹಿಡಿದು

ಉಸಿರು ಬಿಚ್ಚಿ ...

ಉಸಿರಾಡಬಯಸುವ ಅಸ್ತಮಾ ರೋಗಿಯಂತೆ...

Tuesday, April 20, 2010

ನಿಟ್ಟುಸಿರಿನಲ್ಲಿ

ನಿನಗೆ ಪತ್ರ ಬರೆದು ತುಂಬಾ ದಿನ ಆಯ್ತು, ಟೈಮ್ ಇರ್ಲಿಲ್ಲ !! ಸುಳ್ಳು... ಸ್ವಲ್ಪ ಸೋಮಾರಿತನ ಅಷ್ಟೇ, physically conservative.. !! ಗೊತ್ತಿಲ್ಲ ಏನೇ ಬರೆದರೂ, ಏನೇ ಹೇಳಿದರೂ.. ಯಾವುದು ಬರೆದಂತಾಗುತ್ತಿಲ್ಲ. ಏನೋ ಒಂದು ತರಹ ಸಂಕಟ, ವಿಚಿತ್ರ ಗೋಜಲು !!


"ಬರೆದ ಪದಗಳಿಗೆ ಅನಿಸಿದ್ದೆಲ್ಲ ಹೇಳುವ ತಾಕತ್ತಿಲ್ಲ ಅಂತ ಗೊತ್ತಿದ್ದರು ಅದೇನೂ ಒಂದು ಚಟ, ಏನನ್ನೋ ಬಣ್ಣಿಸುವ ಹಂಬಲ.. ಈ ನಿಟ್ಟುಸಿರಿಗೆ ನಿನ್ನೆದೆ ಬಿಟ್ಟರೆ ಬೇರೆ ಮನೆ ಇಲ್ಲ, ಈ ನಿಟ್ಟುಸಿರಿನಲ್ಲಿ ನಿನ್ನದೆಯಲ್ಲಿ ಸ್ವಲ್ಪ ಹೊತ್ತು ಕೂತು ಸ್ವಲ್ಪ ಉಸಿರೆಳೆದುಕೊಂಡು ಹೋಗುವ ಅಭಿಲಾಷೆ ಅಷ್ಟೇ.. ಅಬ್ಬಬ್ಬ!! ಎಷ್ಟೊಂದು ಕುರುಡು ಕನಸು .. ಈ ಕನಸುಗಳಿಗೆ ಸಾವೇ ಇಲ್ಲ" ಆದರು ಅನಿಸಿದ್ದು ಹೇಳಲಾಗ್ತಾ ಇಲ್ಲ !


ಯಾಕೋ ಗೊತ್ತಿಲ್ಲ ಕಣೆ ಯಾವುದೇ ಕಾರಣವಿಲ್ಲದ ಒಂದೊಂದು ಸಲ ಎದೆ ಬರಡಾಗುತ್ತೆ.. ಕಡಲ ಮದ್ಯ ಬಾಯರಿ ನಿಂತರು ಒಂದು ತೊಟ್ಟು ನೀರು ಕುಡಿಯದ ಹಾಗೆ. ಆದರು ನಾನು ನಿನಗೆ ಬರೀಬೇಕು ಅಂತ ಇರೋದು ಇದಲ್ಲ ..ಇದ್ಯಾವುದು ಅಲ್ಲ..


ಬದುಕು ನನ್ನನ್ನು ಪ್ರೀತಿಸೋಕೆ ಹೇಳ್ತಾ ಇದೆ.. ಪ್ರೀತಿ ನಿನ್ನ ಪ್ರೀತಿಸೋಕೆ ಹೇಳ್ತಾ ಇದೆ, ತನ್ನನ್ನು ಪ್ರೀತಿಸದವನು ಇನ್ಯಾರನ್ನು ಪ್ರೀತಿಸಲಾರನಂತೆ .. ನನ್ನನ್ನು ನಾನು ಸವಿಯುತ್ತಿಲ್ಲ ಬರಿ ಸಹಿಸಿಕೊಳ್ಳುತ್ತಿದ್ದೇನೆ.. ಇನ್ನು ಎಷ್ಟು ದಿನ.. ಮತ್ತೆ ಇದಲ್ಲ ನಾ ಹೇಳಬೇಕೆಂದಿರುವುದು !! ಎಂದೋ ಮಾಡಿದ ಆಣೆ, ಕೊನೆವರಗೂ ನಿನ್ ಜೊತೇನೆ ಇರ್ತೀನಿ ಅಂತ ಕೊಟ್ಟ ಭಾಷೆ , ಯಾರಿಗೂ ಹೇಳಬೇಡ ಅಂತ ಹೇಳಿದ ಗುಟ್ಟುಗಳು, ತಬ್ಬಿ ಜೋರಾಗಿ ಅತ್ತಿದ್ದು, ಮತ್ತೆ ಎಲ್ಲ ಕೊಡವಿಕೊಂಡು ನಿನ್ನೊಂದಿಗೆ ಹುಲ್ಲು ಹಾಸಿನ ಮೇಲೆ ಕೂತು ಹಳೆಯದೆಲ್ಲವನ್ನು ಮೆಲಕು ಹಾಕಿದ್ದು ... ಯಾವುದೇ ಅಬ್ಬರವಿಲ್ಲದೆ, ಹಾರಾಟ ಕುಗಾಟವಿಲ್ಲದ ಈ ನೆನಪುಗಳ ಜಾತ್ರೆ ನಿರಂತರ ಅಲ್ವಾ ...? ಮತ್ತೆ ಅದೇ ಅವಡುಗಚ್ಚುವ ಮೌನ !!


ಕೊನೆಗೂ ನಿನಗೆ ಬರಿಬೇಕಾಗಿದ್ದನ್ನು ಬರೆಯಲಾಗಲಿಲ್ಲ .. ಹೋಗಲಿ ಬಿಡು, ನೀನ್ ಹೇಗಿದ್ರು ಬರ್ತಿಯಾಲ್ಲ .. ಬಂದಾಗ ಹೇಳ್ತೀನಿ .. ನಿನಗಾಗಿ ನೀನ್ ಇಷ್ಟ ಪಡೂ ಹಾಡುಗಳ ಕೆಸೆಟ್ ಇಟ್ಕೊಕೊಂಡಿದ್ದಿನಿ ..ನಿನಗೋಸ್ಕರ ಎರಡು ಚೆಂದದ ಕವಿತೆ ಬರ್ದಿದ್ದೀನಿ... ಮತ್ತೆ ನಿನ್ನೊಂದಿಗೆ ಅದೇ ಹಳೆಯ ಮೆಲಕು ಹಾಕಲು ಕಾದಿದ್ದಿನಿ , ನನಿಗೆ ಗೊತ್ತು ನೀನ್ ಬಂದೆ ಬರ್ತಿಯಾ ಅಂತ .. ಆ ನಂಬಿಕೆ ನನಗೆ ಇದೆ , ಯಾಕೆಂದ್ರೆ ನಂಬಿಕೆ ಅಂದ್ರೇನೆ ನೀನ್ ಅಲ್ವಾ ...!!

Tuesday, November 17, 2009

Sitting On A Patch Of Grass

Sitting On A Patch Of Grass 


Come, sit awhile, On this patch of grass, 
This corner of the earth, That is ours alone, 
Till we go our separate ways. 
 Let me rest in your arms, In my mouth a blade of grass, 
Your hair a curtain Sheltering me from the world, 
Your fingers easing the frowns That burrow deeper in my forehead With each passing day. 

Let us not remember, The lengthening shadows in my father's face, 
My mother's pinched and wrinkled skin, 
The worries that like an insidious worm Are eroding their life away, 
My poetry collection that I sold To apply for the last job inteview. 
 Let us also try and forget That your father no longer speaks to you, 
Your sister looks at you with accusing eyes, 
Your mother called you a whore last night, That you are now a stranger in your home, 
Gray strands in your hair no longer a rarity, 
That you will be thirty in a month's time. 
 There will be time enough to remember, 
Once evening dies and we part our ways, 
Instead, let us, for now, 
Look into each other's eyes and be content That the grass below is green still, 
The sky above still daylight blue, 
That the love that I see in your eyes,
 And the dreams that you see in mine, Are not an illusion just yet.

-Santhosh 




 Photo: Nejro