Friday, June 19, 2009

ನೀನಿಲ್ಲದೆ ....

ನೀನು ಮೊದಲು
ನಕ್ಕ ದಿನ
ನಾ ಮೌನಿಯಾದೆ
ಬಾಳ ತುಂಬಾ
ಎಲ್ಲ ಮರೆತು
ನಿನ್ನ ಧ್ಯಾನಿಯಾದೆ

ನಿನ್ನ ನಗುವಿರದ
ನನ್ನ ಊರಿನಲಿ
ಹಕ್ಕಿ ಹಾಡಲಿಲ್ಲ
ನಿನ್ನ ಇರುವಿರದ
ನನ್ನ ತೋಟದಲ್ಲಿ
ಹೂಗಳರಲಿಲ್ಲ

ನನ್ನ ಮನದಲಿ
ನಿನ್ನ ಹೆಸರಿಟ್ಟು
ನನ್ನ ಉಸಿರ ಬೆರೆಸಿ
ಎದೆಯಲಿ ಹಸಿರ ಬೆಳಸಿ
ಹರಸಿ ಹೋದ ಚೈತ್ರ
ಮತ್ತೆ ಮರಳಲಿಲ್ಲ

ನಿನ್ನ ನೋಡುವ
ನಲಿವಿನಲಿ ಮರೆತವು
ಬಾಳಿನ ನಲಿವುಗಳು
ಸೇರುವ ಸಾಹಸದಲ್ಲಿ
ಕಂಡವು ನನ್ನ
ಬಾಳಿನ ಗೆಲುವುಗಳು


Photo: Nic Temby

Thursday, June 18, 2009

ನಿರೀಕ್ಷೆ ...


ದೂರದಲ್ಲೆಲ್ಲೋ ಮೋಡದಡಿಯಲಿ
ಯಾರೋ ಹಾಡುವ ಸವಿ ಹಾಡು
ದೇಹ ಮನಸ್ಸು ಭಾವಗಳೆಲ್ಲವು
ಚುಕ್ಕಿ ಚಂದ್ರಮರ ನಾಡು


ಮನದ ಒಳ ಹೊರಗೂ
ಯಾರೋ ಹಚ್ಚಿಟ್ಟ ದೀಪಗಳು
ಮುಸುಕು ಮುಸುಕಾಗಿ ಕಂಡರೂ ಕಾಣದ
ಅಸ್ಪಷ್ಟ ರೂಪಗಳು


ಈಜಲು ಬಾರದ ಭಾವಗಳನು
ಮುಳುಗಿಸೋ ಬಾವಿಗಳು
ಅಲ್ಲಲ್ಲಿ ಹಚ್ಚಿಟ್ಟು ಹೋದ ದೀಪಗಳು
ನೆಮ್ಮದಿ ತಂದು ಕೊಡುವ ನಾವಿಗಳು



Photo: Rexguo