Monday, March 19, 2012

ಅಮೇಲಿಯ ಅಮಲಿನಲ್ಲಿ..!



ಕೆಲವೊಂದು ಸಿನಿಮಾಗಳು ಮಾತ್ರ ನಮ್ಮ ಹೃದಯಕ್ಕೆ ಲಗ್ಗೆ ಇಡುವಲ್ಲಿ ನೋಡುವಲ್ಲಿ ಯಶಸ್ವಿ ಆಗುತ್ತವೆ, ಆ ತರಹದ ಸಿನಿಮಾ ಸಾಲಿಗಿ ಸೇರಬಹುದಾದ ಚಿತ್ರ ಅಮೆಲಿ ! ಈ ಫ್ರೆಂಚ್ ಸಿನಿಮಾ ಮನಸಿಗೆ ಮುದ ನೀಡುವುದಷ್ಟೇ ಅಲ್ಲದ್ದೆ ನಿಮ್ಮ ಹೃದಯಕ್ಕೆ ತುಂಬಾ ಹತ್ತಿರವೆನಿಸುತ್ತದೆ. ಶುರುವಿನಿಂದ ಕೊನೆಯವರೆಗೂ ಒಂದೇ ಓಘವನ್ನು ಉಳಿಸಿಕೊಂಡು ನಿಮ್ಮನ್ನು ಹೇಳಿಕೊಳ್ಳಲಾಗದ ಚಿಂತನೆಗೆ ಹಚ್ಚುತ್ತದೆ . ನಟಿ ಅಡ್ರೆ ಜುಸ್ಟೀನ್ ಅಮೆಲಿಯ ಪಾತ್ರದಲ್ಲಿ ಮತ್ತು ನಿರ್ದೇಶಕ ಜಾನ್ ಪೀರ್ ರ ಪ್ರತಿಭೆಯನ್ನು ಭಟ್ಟಿಯಿಳಿಸಿದ ಪರಿಮಳ ಪ್ರತಿ ಫ್ರೇಮ್ ಮೂಲೆ ಮೂಲೆಯಲ್ಲೂ ಕಾಣಬಹುದು, ನಿರ್ದೇಶಕರು ಇಡೀ ಸಿನಿಮಾವನ್ನು ಸೆಪಿಯಾ ಮತ್ತು ಹಸಿರು ಬಣ್ಣದಲ್ಲಿ ಅದ್ದಿ ತೆಗದಂತಿದೆ. ನಿರ್ದೇಶಕರು ಚಿತ್ರದಲ್ಲಿ ಸ್ಪೆಷಲ್ ಎಫೆಕ್ಟ್ ಗಳಿಂದ ತಮ್ಮದೇ ಆದ ಪ್ಯಾರಿಸ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆಗೊಮ್ಮೆ ಈಗೊಮ್ಮೆ ಬರುವ ಹಾಸ್ಯ ಕಥೆಯೊಳಗಿನ ಪ್ರಮುಖ ಭಾಗವೆನಿಸುವುದು ಸಿನಿಮಾದ ಹೆಗ್ಗಳಿಕೆ.





ಅವಳ ಹೆಸರು ಅಮೆಲಿ ಪೌಲಿನ್, ಅಮೆಲಿಯ ತಂದೆ ಒಬ್ಬ ಮಿಲಿಟರಿ ವೈದ್ಯ ನಾಗಿರುತ್ತಾನೆ ಬಾಲ್ಯದಲ್ಲಿ ಅಮೆಲಿಯ ಹೃದಯ ಬಡಿತ ಹೆಚ್ಚಗಿರುವುದೆಂದು ಮತ್ತು ಹೃದಯದ ತೊಂದರೆಯಿದೆಯೆಂದು ಭಾವಿಸಿ ಅವಳನ್ನು ಸ್ನೇಹಿತರೊಡನೆ ಬೆರೆಯಲು ಬಿಡದೆ ಅವಳಮ್ಮ ಮನೆಯೇಲ್ಲಿಯೇ ಪಾಠ ಹೇಳಿಕೊಡುತ್ತಾಳೆ . ಹೀಗೆ ಹೊರ ಪ್ರಪಂಚದ, ಸ್ನೇಹಿತರ ನಂಟಿಲ್ಲದೆ ಇಲ್ಲದೆ ಬೆಳದ ಅಮೆಲಿ ತುಂಬಾ ಮುಗ್ಧೆಯಾಗಿರುತ್ತಾಳೆ.

24 ರ ಹರೆಯದ ಅಮೆಲಿ ಕಾಫೀ ಶಾಪ್ ಒಂದರಲ್ಲಿ ಪರಚಾರಕಿಯಾಗಿ ಕೆಲಸ ಮಾಡುತ್ತಿರುತ್ತಾಳೆ , ಅಲ್ಲಿ ಅಮೆಲಿಗೆ ಹೊರಗಿನ ಪ್ರಪಂಚ ಪರಿಚಯವಾಗ ತೊಡಗುತ್ತದೆ. ಅಮೆಲಿಗೆ ಎಲ್ಲವೂ ಹೊಸದು, ಕೆಲವೊಮ್ಮೆ ವಿಚಿತ್ರ, ಎಲ್ಲವನ್ನು ತನ್ನ ಒಡಲಲ್ಲಿ ಹಿಡಿಯುವ ಹಂಬಲ.,ಅವಳು ಸಿನಿಮಾ ನೋಡುವ ರೀತಿಯೇ ಬೇರೆ , ಥಿಯೇಟರ್ ನಲ್ಲಿ ಕೂತು ಹೀಗೆ ಹೇಳುತ್ತಲೇ - I like to look for things no one else catches. I hate the way drivers never look at the road in old American movies, ಕೆಲವೊಮ್ಮೆ ಅಮೆಲಿಗೆ ಪ್ರಪಂಚದಲ್ಲಿ ಈ ಕ್ಷಣ ಎಷ್ಟು ಜನಕ್ಕೆ ಸಂಬೋಗದ ಪರಾಕಾಷ್ಟೆ ಉಂಟಾಗಿದೆ ಎಂದು ತಿಳಿಯುವ ಹಂಬಲ, ಹೀಗೆ ಅಮೇಲಿಯ ತುಂಟಾಟಿಕೆ ನಿಮ್ಮನ್ನು ಮುಜುಗರಕ್ಕೆ ನೂಕಿದರೂ ಅವಳ ಹೊಳೆಯುವ ಕಣ್ಣುಗಳು, ಸದಾ ಒಪ್ಪವಾಗಿ ಬಾಚಿದ ಆಕೆಯ ಕೂದಲು, ನಕ್ಕಾಗ ಗುಳಿ ಬೀಳುವ ಕೆನ್ನೆ ಖಂಡಿತ ನಿಮ್ಮನ್ನು ಸಮ್ಮೋಹನಕ್ಕೆ ಒಳಪಡಿಸುತ್ತದೆ.


ಹೀಗೊಂದು ದಿನ ಅಮೆಲಿ ತಾನು ವಾಸಿಸುತ್ತಿದ್ದ ಮನೆಯಲ್ಲಿ ಇದರ ಹಿಂದೆ ಇದ್ದ ವಾಸವಿದ್ದ ಬಾಡಿಗೆದಾರ ಮಗುವೊಂದು ಸಿಗಾರ್ ಬಾಕ್ಸ್ ನಲ್ಲಿ ಅಡಗಿಸಿಟ್ಟಿದ್ದ ಆಟಿಕೆಗಳು ಸಿಗುತ್ತದೆ , ಅದು ಬಹುಷಃ ನಲವತ್ತು ವರ್ಷ ಹಳೆಯಾದ್ದಾಗಿರಬಹುದು. ಈಗ ಅಮೆಲಿಗೆ ಹೇಗಾದರೂ ಮಾಡಿ ಈ ಆಟಿಕೆಗಳನ್ನು ಅದರ ಮಾಲೀಕರಿಗೆ ತಲುಪಿಸುವ ಹಂಬಲ, ಅವಳು ತನ್ನೆಲ್ಲ ಸಮಯವನ್ನು ಆಟಿಕೆಯ ಮಾಲೀಕನನ್ನು ಹುಡುಕುವುದಕ್ಕೆ ಮೀಸಲಿಡುತ್ತಾಳೆ, ಕೊನೆಗೂ ಅಮೆಲಿ ತನ್ನನ್ನು ಗುರುತಿಸಿಕೊಳ್ಳದೆ ಆತನನ್ನು ಹುಡುಕಿ ಅದನ್ನು ತಲುಪಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ತನ್ನ ಬಾಲ್ಯದ ನೆನಪು ಸಿಕ್ಕ ಖುಷಿಯಲ್ಲಿ ಆ ಮನುಷ್ಯ ಮತ್ತೆ ಮಗುವಾಗಿ ಆನಂದ ಪಡುತ್ತಾನೆ. ಅವನ ಸಂತೋಷವನ್ನು ನೋಡಿದ ಅಮೆಲಿ ಮತ್ತೊಬ್ಬರು ಕಳೆದುಕೊಂಡ ಚಿಕ್ಕ ಚಿಕ್ಕ ಸಂತೋಷಗಳನ್ನು ಹುಡುಕಿಕೊಡುವ ನಿರ್ಧಾರ ಮಾಡುತ್ತಾಳೆ. ಕುರುಡನಿಗೆ ಇಡೀ ಊರ ಅಸ್ತಿತ್ವವನ್ನು, ಪರಿಮಳವನ್ನು ಪರಿಚಯ ಮಾಡಿಸಿಕೊಡುತ್ತಾಳೆ, ತನ್ನ ಸಹೋದ್ಯೋಗಿಗೆ ಆಕೆಯ ಪ್ರೀತಿಯನ್ನು ತೋರಿಸಿಕೊಡುತ್ತಾಳೆ, ಗಂಡನನ್ನು ಕಳೆದು ಕೊಂಡವಳೋಬ್ಬಳಿಗೆ ಸಂತ್ವಾನ ನೀಡುತ್ತಾಳೆ. ಇಲ್ಲಿ ಅಮೆಲಿ ಯಾವುದೇ ಢಾಂಬಿಕತೆಗೆ , ಒಣಜಂಭಕ್ಕೆ , ಪ್ರಚಾರಕ್ಕೆ ಹಪಿಸುವುದಿಲ್ಲ, ಅವಳಿಗೆ ಬೇಕಾಗಿರುವುದು ಇನ್ನೊಬ್ಬರ ಸಂತೋಷ, ಅವರ ಬೆಚ್ಚಗಿನ ನಗು ಮಾತ್ರ.

ಚಿತ್ರ ಮುಂದುವರಿದಂದೆ ಕೆಲವೊಂದು ಫ್ಲಾಶ್ ಬ್ಯಾಕ್ ಚಿತ್ರವನ್ನು ಚೆಲ್ಲಾಪಿಲ್ಲಿ ಮಾಡಿದನಿಸಿದರೂ ಅದು ತಾತ್ಕಾಲಿಕ ಮಾತ್ರ, ತಕ್ಷಣ ಅದರ ನಿರಂತರತೆ ಆರ್ಥವಾಗಿಬಿಡುತ್ತದೆ. ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರ "ನೀನೂ" ಈತ ಫೋಟೋ ಬೂತ್ ಗಳಲ್ಲಿ ಜನರು ಚೆನ್ನಾಗಿಲ್ಲವೆಂದುಕೊಂಡು ಬಿಸಾಡಿದ ಫೋಟೋಗಳನ್ನು ಹೆಕ್ಕಿ ಆಲ್ಬಮ್ ಮಾಡಿ ಜೋಡಿಸುವುದು ಅವನ ಹವ್ಯಾಸ. ನೀನೂ ತಾನು ಅತ್ಯಂತ ಪ್ರೀತಿಸಿದ ಆಲ್ಬಮ್ ದಾರಿಯಲ್ಲಿ ಬೀಳಿಸಿದಾಗ ಅಮೆಲಿ ಅದನ್ನು ಜೋಪಾನ ಮಾಡಿ ನೀನೂವನ್ನು ಹುಡುಕಿ ಅವನಿಗೆ ಹಿಂತಿರುಗಿಸುತ್ತಾಳೆ, ಆದರು ಅಮೇಲಿಯ ಸಂಕೋಚತನ ತನ್ನನ್ನು ಗುರುತಿಸಿಕೊಳ್ಳಲು ಬಿಡುವುದಿಲ್ಲ. ಕೊನೆಗೆ ಅಮೇಲಿಯ ವೃದ್ಧ ಚಿತ್ರಕಾರ ಸ್ನೇಹಿತ ಆಕೆಯ ಅಂಜಿಕೆ, ಸಂಕೋಚವನ್ನು ದೂರ ಮಾಡಿನಿನೂವಿನೊಂದಿಗೆ ಸೇರಲು ಸಹಾಯ ಮಾಡುತ್ತಾನೆ. ಚಿತ್ರ ಅಮೆಲಿ ಮತ್ತು ನೀನೋ ಒಂದಾಗುವುದರೊಂದಿಗೆ ಕೊನೆಯಾಗುತ್ತದೆ. ಚಿತ್ರದ ಯಾವ ಪಾತ್ರವು ಭಾವತಿರೆಕಕ್ಕೆ ಹೋಗದೆ ನಿಮ್ಮನ್ನು ಹೇಳಿಕೊಳ್ಳಲಾಗದ ಭಾವ ತುಮುಲಕ್ಕೆ ನೂಕುತ್ತದೆ. ಬ್ರುನೋರ ಛಾಯಾಗ್ರಹಣ, ಅಡ್ರೆ ಜುಸ್ಟೀನ್ ಳ ಮುಗ್ಧ ನಟನೆ ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದು ಹೋಗುತ್ತದೆ ಚಿತ್ರ ಮುಗಿದರೂ ಅಮೆಲಿಯ ಅಮಲು ನಿಮ್ಮನ್ನು ಮತ್ತೆ ಆವರಿಸಿಬಿಡುತ್ತದೆ. ಇದರ ಇಂಗ್ಲಿಷ್ ಉಪಶೀರ್ಷಿಕೆ ಕೊಂಚ ನೇರ ಮತ್ತು ಸರಾಗ ಮಾಡಿದ್ದಲ್ಲಿ ನೋಡುಗರಿಗೆ ಚಿತ್ರ ಮತ್ತಷ್ಟು ಪರಿಣಾಮಕಾರಿಯಾಗಿರುತಿತ್ತು . .

1 comment:

  1. ಚಿತ್ರವೊಂದರ ವಿಶ್ಲೇಷಣೆ ಚೆನ್ನಾಗಿ ಮೂಡಿಬಂದಿದೆ ಸಂತೋಷ್ ಅವರೆ. ನಿಮ್ಮ ಬರಹವನ್ನು ಓದುತ್ತಾ ಓದುತ್ತಾ ನಾನೇ ಆ ಚಿತ್ರವನ್ನು ನೋಡುತ್ತಿದ್ದೇನೇನೋ ಅನಿಸಿತು. ಅಭಿನಂದನೆಗಳು :-)

    ReplyDelete