ಮೈಸೂರಿಂದ ಸುಮಾರು ೫೫ ಕಿ. ಮೀ ದೂರದಲ್ಲಿರುವ ಚಾಮರಾಜನಗರದಲ್ಲಿ (ಈಗ ಪ್ರತ್ಯೇಕ ಜಿಲ್ಲೆ) ನಮ್ ಮನೆ ಇದೆ , ನೀವು ಅಂದುಕೊಳ್ಳಬಹುದು ಅದೇನು ದೊಡ್ಡ ವಿಷಯ ಅಂತ, ಎಲ್ಲಾರ್ ಮನೇನು ಒಂದಲ್ಲ ಒಂದು ಊರಲ್ಲಿ ಇದ್ದೆ ಇರುತ್ತೆ. ಆದ್ರೆ ನಮ್ ಮನೆ ಈ ಭೂಮಿ ಮೇಲಿರೋ ಎಲ್ಲಾ ಮನೆಗಳಿಗಿಂತ ತುಂಬ ಸ್ಪೆಷಲ್. ಅಲ್ಲಿ ನನ್ ಅಣ್ಣ ಜಯದೇವ್ ಇದ್ದಾರೆ , ನಿಮಗೆ ಗೊತ್ತಿರ್ಲಿಕ್ಕಿಲ್ಲ ಅವ್ರು ರಾಷ್ಟ್ರ ಕವಿ ಜಿ . ಎಸ್ . ಶಿವರುದ್ರಪ್ಪ ಅವರ ಮಗ . ಅಂದ ಹಾಗೆ ನಮ್ ಮನೆ ಹೆಸರು "ದೀನಬಂಧು" ಮೊದಲು ನಮ್ ಅಣ್ಣ ನಾವು ನಾಲ್ಕು ಮಕ್ಕಳಿಗೆ ಮಾತ್ರ ಅಣ್ಣ ಆಗಿದ್ರು ಈಗ ಐವತ್ತು ಮಕ್ಕಳಿಗೆ ಅಣ್ಣ ... ದೀನಬಂಧು ಒಂದು ಮಕ್ಕಳ ಮನೆ , ನಾನು ಬೆಳದ ಮನೆ ಅನ್ನುವುದಕ್ಕಿಂತಲೂ ಬದುಕಲು ಕಲಿಸಿದ ಮನೆ ಅನ್ನಬಹುದು.ಅಣ್ಣನ ಎದೆ ಮೇಲೆ ತಲೆಯೊಡ್ಡಿ ಚಂದಮಾಮನ ಕಥೆ ಕೇಳಿದ್ದು , ಅದೇ ಅಣ್ಣನ ಜೇಬಿನಿಂದ ಹಣ ಕದ್ದು ಬಾಸುಂಡೆ ಏಟು ತಿಂದು ಊಟ ಮಾಡದೆ ಮಲಗಿದಾಗ , ಅಣ್ಣ ಮತ್ತೆ ಎಬ್ಬಿಸಿ ಮುದ್ದು ಮಾಡಿ ಊಟ ಮಾಡಿಸಿದ್ದು ನೆನಪಾದಗೆಲ್ಲ ಬಾಯಲ್ಲಿನ ಎಂಜಲು ಗಂಟಲೊಳಗೆ ಇಳಿಯಲು ತಿನುಕ್ಕಾಡುತ್ತದೆ. ನೆನಪುಗಳೇ ಹಾಗೆ "ಈಗ ತಾನೆ ಯಾರೂ ಪಕ್ಕದಲ್ಲಿ ಕೂತು ಎದ್ದು ಹೋದ ಹಾಗೆ"
ರೇಡಿಯೋದಲ್ಲಿ "ಜ್ಯೋತಿ ಕಲಶ ವಿಠ್ಠಲ" ಹಾಡು ಬರುತ್ತಿದೆ ...ಅಣ್ಣ ತುಂಬ ಇಷ್ಟ ಪಟ್ಟು ಕೊಳಲಿನಲ್ಲಿ ನುಡಿಸುತಿದ್ದ ಹಾಡು ಅದು (ಯಾವ ರಾಗ ಅಂತ ಸರಿಯಾಗಿ ಗೊತ್ತಿಲ್ಲ), homesick ಸಿಕ್ಕಾಪಟ್ಟೆ ಕಾಡ್ತಾ ಇದೆ ಕಂಡ್ರಿ .. ಒಂದ್ ವಾರ ಆಫೀಸಿಗೆ ರಜೆ ಹಾಕಿ ಮನೆಗೆ ಹೊರಟಿದ್ದೀನಿ .. ಹಳೆ ನೆನಪುಗಳನ್ನು ಕೆದಕಲು .. ನಮ್ ಮನೆ , ನಮ್ ಅಣ್ಣನ ನೋಡೋ ಆಸೆ ಇದ್ರೆ ಖಂಡಿತ ನನ್ ಜೊತೆ ಬನ್ನಿ .....
