Saturday, November 29, 2008

ಶ್ರೀ ಸರ್ವಧಾರಿ ನಾಮ ಸಂವತ್ಸರದ ಕಾರ್ತಿಕ ಮಾಸ ..etc..etc..

ಸಾಮಾನ್ಯವಾಗಿ ನಾನು ಯಾವುದೇ ಮದುವೆ ಸಮಾರಂಭಗಳಿಗೆ ಹೋಗಲು ಇಷ್ಟ ಪಡುವುದಿಲ್ಲ .. ಕೊನೆಗೆ ತುಂಬಾ ಬಲವಂತದಿಂದ ಒಂದು ಮದುವೆಗೆ ಹೋಗಿ ಬಂದದ್ದಾಯಿತು ..


ಮದುವೆ ಮನೆಯಲ್ಲಿ ಎಷ್ಟೊಂದು ಸಂಭ್ರಮ , ಅದ್ದೂರಿ , ಸಡಗರ, ರಾತ್ರಿಯಾಯಿತೆಂದರೆ ಜಗಮಗಿಸುವ ದೀಪ .. ಇನ್ನು ಚಂದದ ಚೆಲುವೆಯರನ್ನು ನೋಡ್ತಾ ಇದ್ರೆ .. ಆಹಾ !! , ಅದರಲ್ಲೂ ಒಂದು ಪೆಗ್ ಹಾಕೊಂದೂದ್ರಂತು ಮುಗೀತ್ ಕಥೆ .. ಸ್ವರ್ಗಕ್ಕೆ ಅರ್ದ ಗೇಣು ಬಾಕಿ .


ಮದುವೆ ಛತ್ರಕ್ಕೆ entry ಕೊಡ್ತಾ ಇದ್ದ ಹಾಗೆ , ಹಿರಿಯರೊಬ್ಬರು " ಏನಪ್ಪಾ ಚೆನ್ನಾಗಿದ್ದೀಯ , ಎಷ್ಟು ದಿನ ಆಯಿತು ನಿನ್ ನೋಡಿ , ಊರಲ್ಲಿ ಎಲ್ಲಾ ಆರಾಮ ? ಎಲ್ಲಿ ಅವ್ರು ಬಂದಿಲ್ಲ ?? ( ಯಾರು ಅಂತ ಕೇಳೋಕೆ ಹೋಗಲಿಲ್ಲ .. ಇಲ್ಲ ಅವ್ರು ಸ್ವಲ್ಪ ಬ್ಯುಸಿ ಅಂದ್ಬಿಟ್ಟೆ !) ಪಾಪ ಯಾರ್ ಬಗ್ಗೆ ಕೇಳಿದ್ರು ಅಂತ ಗೊತ್ತಾಗ್ಲಿಲ್ಲ , ನಾನು ಜಾಸ್ತಿ ತಲೆ ಕೆಡ್ಸೋಕ್ಲಿಲ್ಲ... ಮಜಾ ಅಂದ್ರೆ , ನನ್ ಬಗ್ಗೆ , ನಮ್ ಊರ್ ಬಗ್ಗೆ ವಿಚಾರಿಸಿದ ಅವ್ರು ಯಾರು ಅಂತಾನೆ ಇವತ್ತಿನವರ್ಗು ಗೊತ್ತಾಗ್ಲಿಲ್ಲ ..!.


ಇನ್ನು ಊಟ ಬರೋಬ್ಬರಿ 22 item, (ತುಂಬಾ carefull ಆಗಿ ಕೌಂಟು ಮಾಡಿದ್ದು) ಅಬ್ಬಬ್ಬಾ ! ಎಂತ ರುಚಿ ಅಂತಿರ .. ಊಟ ಆದ್ ಮೇಲು ಕೆಲವು ಮಂದಿ ಕೈಗೆ ಹತ್ತಿದ ಸುವಾಸನೆಯನ್ನು , ಕೈ ಮೂಸಿ ಮೂಸಿ ಅನುಭವಿಸ್ತಾ ಇದ್ರೂ (ಬಲಗೈ ಮುಸ್ತಾ ಇದ್ರೋ , ಎಡಗೈ ಮುಸ್ತಾ ಇದ್ರೋ ಅಂತ confuse ಆಗಿದೆ )


ಇದೆಲ್ಲವೂ ಮದುವೆ ಛತ್ರದ ಒಂದು ಭಾಗದ ಸಂಭ್ರಮ , ಇನ್ನೊಂದು ಭಾಗ ನೋಡಬೇಕು ... ಎಂತಹ ವೈಚರಿತ್ಯ !ಪುಟ್ಟ ಹುಡುಗಿ ತಲೆ ಮೇಲೆ ಹೊತ್ತ ಸಾರಿನ ಪಾತ್ರೆ .. ತಲೆ ಕೂದಲಿಂದ ಇಳಿತಿರೋ ಸಾರು ..ಮುಖಕ್ಕೆ ಅಂಟಿರುವ ಅನ್ನದ ಅಗಳುಗಳು.. ಚಿಕ್ಕ ಮಗು ರಚ್ಚೆ ಹಿಡಿದು ಅತ್ತು ಅತ್ತು ಸುಸ್ತಾಗಿ ಆ ಮುಸರೆಯಲ್ಲೇ ಮಲಗಿರೂದು .. ಮಸಿ ಹಿಡಿದ ಹೆಣ ಭಾರದ ಅನ್ನದ ಪಾತ್ರೆಯನ್ನು ತಾನೊಬ್ಬಳೇ ಹೊತ್ತು ತಂದು ಬೆಳ್ಳಗಾಗಿಸಲು ಹೊರಟ ಇವುಗಳ ತಾಯಿ ..

ಇಂಥ ದೃಶ್ಯಗಳು ಎಲ್ಲಾ ಮದುವೆ ಮನೆಯಲ್ಲಿ ಸಾಮನ್ಯ ..ಯಾರು ಅದರ ಬಗ್ಗೆ ಅಷ್ಟು ಗಮನ ಕೊಡೋದಿಲ್ಲ ಬಿಡಿ ..


ಇನ್ನು ಮದುವೆ ಮುಗಿದ ಮೇಲೆ ಹೆಣ್ಣಿನ ಕಡೆಯ ಹಿರಿಯ ಕೆಲಸದವರಿಗೆ Tips ಕೊಡೂದು ಒಂದು ವಾಡಿಕೆ .. ಮಗಳ ಮದುವೆಗೆ ಅಳಿಯ ದೇವರಿಗೆ skoda ಕಾರಿಂದ ಹಿಡಿದು ಹಾಕೊಳೋ ಚಡ್ಡಿ ವರೆಗೂ ದಾರಾಳವಾಗಿ ಖರ್ಚ ಮಾಡಿ ..ಕೊನೆಗೆ ಮುಸುರೆ ತಿಕ್ಕುವವರ tips ವಿಷಯಕ್ಕೆ ಬಂದಾಗ ಭಯಂಕರ ಜಿಪುನಾಗ್ರೆಸರಾಗಿ ಬಿಡ್ತಾರೆ .. ಆತ ಆ ಸಮಯದಲ್ಲಿ ಸ್ವಾರ್ಥಿ ಆಗಿರೋದಿಲ್ಲ , ಸ್ವಾರ್ತಿಯಾಗಿದ್ದರೆ ಪರವಾಗಿಲ್ಲ . ಅದು ಅವನ ತುಚ್ಹತನ ಅಂದ್ರೆ ತುಂಬಾ Cheap ಆಗಿಬಿಡ್ತಾನೆ

ಹುಡುಗ ಒಳ್ಳೆಯವನಾಗಿದ್ದು , ಆಕೆಯನ್ನು ಚೆನ್ನಾಗಿ ಸಾಕಿದರೆ ಬಚಾವ್ .. ಒಂದು ವೇಳೆ postmortem report ಜೊತೆಗೆ ಹುಡುಗಿ pack ಆಗಿ ಮನೆಗೆ ಬಂದ್ರೆ .. ಕೈ ಕೈ ಮೂಸಿಕೊಂಡ ಸಂಭಂದಿಕರು , ಮಟ ಮಟ ಮದ್ಯಹನ್ನದಲ್ಲಿ ಅರುಂದತಿ ನಕ್ಷತ್ರ ತೋರಿಸಿದ ಪುರೋಹಿತರು "ಅಯ್ಯೋ ಪಾಪ" ಅನ್ನೋದು ಬಿಟ್ರೆ ಏನು ಮಾಡಲಾರರು

Wednesday, November 26, 2008

ಊರು ಮನೆ ಇಲ್ಲದವರು


ಅದೊಂದು ಅದ್ಭುತವಾದ ಕಲೆ , ನಿಜವಾದ ನಟನೊಬ್ಬ ಮಾತ್ರ ರಂಗ ಭೂಮಿಯಲ್ಲಿ ಉಳಿಯಬಲ್ಲ . ಅಲ್ಲಿ ದಿನವೂ ಹಬ್ಬದ ವಾತವರಣ ,
ಹೊಟ್ಟೆ ತುಂಬ ಊಟವಿಲ್ಲದಿದ್ದರು ಹೊಟ್ಟೆ ತುಂಬ ನಗು ತುಂಬಿರುತ್ತದೆ .
ನಿಜಕ್ಕೂ ಪ್ರತಿಬಾವಂತ ಕಲಾವಿದರಿರುತ್ತಾರೆ , ಸ್ಟೇಜ್ ಮೇಲೆ ಬಂದಾಗ ಪ್ರೇಕ್ಷಕರು ಅಂಡು ಅಲುಗಾಡದಂತೆ ಕೂರುತ್ತಾರೆ . ಕೆಲವೊಂದು ಕೆಳ ಮಟ್ಟದ ಸಂಭಾಶನೆಗಳಿದ್ದರು ರಂಜನೀಯವಾಗಿರುತ್ತದೆ .


"ಎಲ್ಲಿಯು ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು " ಎಂಬ ಕವಿ ವಾಣಿ ಅವರಿಗೆ ಚೆನ್ನಾಗಿ ಒಪ್ಪುತ್ತದೆ , ಎಲ್ಲಿಯು ನಿಲ್ಲದ ಊರೂರು ತಿರುಗಾಟ ಮನೆಯು ಇಲ್ಲ ಕೊನೆಯು ಇಲ್ಲ . ಅವರು ಒಂದು ಊರಲ್ಲಿ ಹೆಚ್ಚೆಂದರೆ ಆರರಿಂದ ಒಂದು ವರ್ಷದವರೆಗೆ ಮಾತ್ರ ಉಳಿಯಬಲ್ಲರು .
ಒಂದು ದಿನ ಹೌಸ್ ಫುಲ್ ಕಂಡರೆ ಒಂದು ವಾರ ಊಟಕ್ಕೆ ಯೋಚನೆ ಇಲ್ಲ .
ಒಂದು ವೇಳೆ ನಸೀಬು ಮಕಾಡೆ ಮಲ್ಕೊಂಡು ಜೋರಾಗಿ ಮಳೆ ಬಂದು ಒಳಗೆ ನೀರು ತುಂಬಿ ಕೊಂಡರಂತೂ ..ಅವರ ಕಥೆ ಹೇಳ ತೀರದು . ಮೂರೂ ದಿನ ಹೀಗೆ ಜೋರು ಮಳೆ ಬಂದದ್ದೆ ಆದರೆ ನಾಲ್ಕನೆಯ ದಿನಕ್ಕೇ ಕಟ್ಟಿದ್ದ ಕಂಬ , ಇಟ್ಟ ಗೂಟ , ತಕಡು, ಹಾರ್ಮೋನಿಯಮ್ ಪೆಟ್ಟಿ , ತಬಲಾ , ಡ್ರಮ್ ಸೆಟ್ಟು , ಪರದೆ , ಹಗ್ಗ ಎಲ್ಲವನ್ನು ಗಂಟು ಕಟ್ಟಿ ಊರ ಜನಗಳ ಹತ್ತಿರ ಭಿಕ್ಷೆ ಬೀಡಿ ಟೆಂಪೂ ದವನಿಗೆ ಅರ್ದಂಬರ್ದ ಬಾಡಿಗೆ ಕೊಟ್ಟು ಬೇರೆ ಊರಿಗೆ ಪ್ರಯಾಣ . ಮನೆಯು ಇಲ್ಲ ಕೊನೆಯು ಇಲ್ಲ .
ಇನ್ನು ನಟರ ಮತ್ತು ಕೆಲಸಗಾರರ "ಪಗಾರ" ಎಂಬ ಅವರ ಪದ ದೂರದ ಮಾತು . ಇನ್ನು ಅಲ್ಲಿ ಇರುವ ಕೆಲಸಗಾರರು ಅಂದರೆ ರಂಗ ಪಟ್ಟಿ ಮಾಡುವವರು , ನೀರು ತುಂಬುವವರು , ಪರದೆ ಕಟ್ಟುವವರು - ಇವರ ಬದುಕಂತೂ ಯಾವ ಶತ್ರುವಿಗೂ ಬೇಡ .

ಎಲ್ಲಾ ವೃತ್ತಿ ರಂಗ ಭುಮಿಯವರ ಹಣೆ ಬರಹ ಇಷ್ಟೇ ..
ಎಲ್ಲೂ ಕೆಲವೊಂದು ನೆಮ್ಮದಿಯಿಂದ ಇದ್ದರೂ ಇರಬಹುದು . ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಹಣೆ ಪಟ್ಟಿ ಹಚ್ಚಿಕೊಂಡು ಸರ್ಕಾರದ ದುಡ್ಡಿಗಾಗಿ ಹೊಂಚು ಹಾಕುತ್ತಿರುವ , ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ದೊಡ್ಡ ದೊರೆಗಳ Sponsorship ಗಾಗಿ ಅವರ ಮನೆಯ ಗೇಟು ಕಾಯುವ ಹವ್ಯಾಸಿ ರಂಗ ಭೂಮಿಯವರ ಎದುರು ವೃತ್ತಿ ರಂಗ ಭೂಮಿ ಕಲಾವಿದರು ಹೆಚ್ಚು ಸ್ವಾಭಿಮಾನಿಗಲೆನಿಸುವುದಿಲ್ಲವೇ..??

Friday, November 21, 2008

ಮನದ ಮನೆಗೆ

ಸರಿಯಾಗಿ ನೆನಪಿಲ್ಲ , ನನ್ನ ಕಾಲೇಜು ದಿನಗಳಲ್ಲಿ ಬರೆದ ಕವಿತೆ ಇದು . ಆಗ ಈ ಕವಿತೆಗೆ "ಬಾ ಗೆಳತಿ" ಅಂತ ಹೆಸರು ಕೊಟ್ಟಿದ್ದೆ . ಈ ಕವಿತೆಯನ್ನು ಓದಿದ ನನ್ನ ಅಣ್ಣ "ಯಾವ ಗೆಳತಿಗೊಸ್ಕರ ಬರೆದಿದ್ದಿಯಪ್ಪಾ ಅಂತ ಸ್ವಲ್ಪ ಸೀರಿಯಸ್ ಆಗೇ ಕೇಳಿದ್ದರು.

ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ

ಮೆಲ್ಲ ತೆರೆದು ನೋಡು ಮನದ ಕದವನ್ನು
ನೂರು ಕವಿತೆ ನೂರು ಹಾಡು
ಕಾದಿದೆ ಪೂರ್ಣ ಕುಂಭದಲ್ಲಿ
ಬಾ ಗೆಳೆತಿ ಎಲ್ಲ ಉಕ್ಕಿ ಹರಿಯುವ ಮುನ್ನ

ಜಗದ ಮಾತು ಮಸಲತ್ತು ಏನೇ ಇರಲಿ
ನಮ್ಮಾಸೆ ಕನಸುಗಳೇ ನಮಗೆ ಹೆಚ್ಚು
ಕಣ್ರೆಪ್ಪೆಯಲ್ಲಿ ಬಚ್ಚಿಟ್ಟು ಸಾಕುವೆ ಗೆಳತಿ
ನನ್ನೀ ಕಂಗಳು ಮುಚ್ಚುವ ತನಕ

ಬರುವುದಾದರೆ ಬಂದು ಬಿಡು ಗೆಳತಿ
ನನ್ನೀ ಮನದ ಮನೆಗೆ

ಕೆಲವರು ಮನೆಯ ಕದ ತಟ್ಟಿದ್ದರೂ ಒಳ ಬರಲು ಯಾರು ದೈರ್ಯ ಮಾಡಿಲ್ಲ . ಕೊನೆಗೆ ನನ್ನ ಮನದ ಮನೆಯಲಿ ಒಬ್ಬನೇ ಬೆಚ್ಚನೆ ನೆನಪುಗಳನ್ನು ಹೊದ್ದು ಮಲಗಿರಬೇಕಾದರೆ ... ಯಾರೂ ಬಂದು ಬಾಗಿಲು ತಟ್ಟಿದ ಹಾಗೆ , ನೋಡಿದರೆ ಯಾರು ಇಲ್ಲ !! .. ಆಗೆಲ್ಲ ಈ ಕವಿತೆ ನೆನಪಾಗಿ ಯಾರೂ ಒಬ್ಬಳಿಗೆ ಆಮಂತ್ರಣ ಕೊಟ್ಟ ಹಾಗೆ , ಮನದ ಮನೆಗೆ ಸ್ವಾಗತ ಕೋರಿದ ಹಾಗೆ .. ಛೆ !! ಮತ್ತೆ ಆದೇ ಭಾವುಕತೆ .. ಆ ಭಾವುಕತೆಗೆ ಇನ್ನೊಂದು ಕವಿತೆ , ಇನ್ನೊಂದು ಭಾವನೆ ...

Wednesday, November 19, 2008

ಬ್ರೆಡ್,ಬಟರ್ ಅಂಡ್ ಜಾಮ್ !!

ಬೆಂಗಳೂರಿನ ಜನಕ್ಕೆ ಟ್ರಾಫಿಕ್ ಜಾಮ್ ಏನು ಹೊಸದಲ್ಲ , ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಅದರ ಕಹಿ ಅನುಭವ ಆಗೇ ಆಗಿರುತ್ತೆ , ಆದ್ರೆ ಮಾತ್ರ ಬೆಂಗಳೂರಿನಲ್ಲಿ ಇದ್ದಿದ್ದಕ್ಕೆ ಮರ್ಯಾದೆ . "ಟ್ರಾಫಿಕ್ ಜಾಮ್ " ಅನ್ನೋ ಪದ ಕೆಲವೊಮ್ಮೆ ತುಂಬ ಸಹಾಯ ಮಾಡುತ್ತೆ ಕಂಡ್ರಿ . ನಮ್ ಆಫೀಸ್ ಹುಡ್ಗನ್ನ ಯಾವೊದೋ ಕೆಲಸದ ಮೇಲೆ ಹೊರಗೆ ಕಳಿಸಿ .. ಎಷ್ಟೊತ್ತದ್ರು ಬರದೆ ಇದ್ದಾಗ , ಹಲೋ ! ಎಲ್ಲಿದಿಯಪ್ಪ ರಾಜಕುಮಾರ್ ! M G ರೋಡಿಂದ ಮಲ್ಲೇಶ್ವರಂಗೆ ಬರೋಕ್ಕೆ ಎರಡು ಘಂಟೆ ಕಾಲ ಬೇಕೆನಪ್ಪ ... ಅದಕ್ಕವನು , ಸಾರ್ .. ಇಲ್ಲ ಸಾರ್ ಫುಲ್ ಜಾಮು ! ಗಾಡಿ ಮೋವೇ ಆಗ್ತ ಇಲ್ಲ ಸಾರ್ !... ಮುಗೀತ್ ಬೇರೆ ಮಾತಾಡ್ದಂಗಿಲ್ಲ . ಇದು ಪ್ರತಿ ದಿನದ ಕಥೆ . ಆದ್ರೆ ಮೊನ್ನೆ "ಕುಮಾರ್ಸಾಮಿ ಜಾಮ್ " ಬೆಂಗಳೂರು ಟ್ರಾಫಿಕ್ ಇತಿಹಾಸದಲ್ಲಿ ಎಂದೂ ಕಂಡರಿಯದ ಮಹಾನ್ ಸಾದನೆ !! .. ನಾನು ಕೂಡ ಸಣ್ಣ ಪುಟ್ಟ ಟ್ರಾಫಿಕ್ ಜಾಮ್ ಸಾಧನೆ ಮಾಡಿದ್ದೀನಿ .. ಕಳೆದ ವಾರ ಮಿನ್ನರ್ವಾ ಸರ್ಕಲ್ಲ್ನಲ್ಲಿ ಸ್ನೇಹಿತನ ಜಿಪ್ಸಿ ಓಡಿಸ್ತಿನಿ ಅಂತ ಬಲವಂತವಾಗಿ ಗಲಾಟೆ ಮಾಡಿ ತಗೊಂಡು , ರಿವೆರ್ಸ್ ತೆಗಿಯೋಕೆ ಆಗದೇನೆ ಅಡ್ಡಡ್ಡ ನಿಲ್ಸಿ ಕಾಲ್ ಘಂಟೆ ಜಾಮ್ ಮಾಡಿದ್ದೆ . ಕೊನೆಗೆ ಆಟೋ ಡ್ರೈವರ್ ಯಿಂದ ಸ್ಕೂಟಿ ಹುಡ್ಗೀರ್ ವರೆಗೂ ಖರಾಬಾಗಿ ಬೈಸಿಕೊಂಡು ಪೋಲಿಸ್ ಮಾಮಂಗೆ 200 ಕೊಟ್ಟು ಬಂದಿದ್ದಾಯಿತು . ಅಷ್ಟಕ್ಕೆ 200 ಅಂದ್ರೆ ಈ ಮಣ್ಣಿನ ಮಗನ ಮಗನ್ ಸಾಧನೆಗೆ ಎಷ್ಟು ದಂಡ ಹಾಕಬೋದು ಅಂತ ನೀವೇ ಹೇಳಿ !

ನಾನೂ ಈ ದೇಶದಲ್ಲಿನ ಸುಮಾರು ಎಲ್ಲಾ ಪಟ್ಟಣಗಳ ಟ್ರಾಫಿಕ್ ಜಾಮ್ ಗಳಿಗೆ ಸಾಕ್ಷಿಯಾಗಿದ್ದೇನೆ , ಆದ್ರೆ "ಕುಮಾರ್ಸಾಮಿ ಜಾಮ್" ಮುಂದೆ ಯಾವ್ದು ಸಮ ಆಗೋಕೆ ಸಾದ್ಯ ಇಲ್ಲ ಬಿಡಿ ...

ಅವತ್ತು ಹೀಗೆ ಜಾಮ್ ಮದ್ಯ ನನ್ ಜಿಂಗ್ಲಿ ನ (ನನ್ ಬೈಕ್ ಹೆಸರು ) ನಿಲ್ಸಕೊಂಡಿದ್ದೆ... ಪಕ್ಷದ ಎಲ್ಲಾ ಚಮಚ , ಸ್ಪೂನು ಸೌಟು , ಬಾಟಲಿಗಳು ಗುಂಪುಗುಂಪಾಗಿ ಫುಟ್ ಪಾತು , ರೋಡು ಸರ್ವೆಯ್ ಮಾಡ್ತಾ ಹೋಗ್ತಾ ಇತ್ತು , ಅಲ್ಲೊಬ್ಬ ಬಾಟಲಿ ನನ್ ಹತ್ರ ಬಂದು ... ಸಾರ್ ನೆಸ್ತು ನಮ್ ಅಣ್ಣನೆಯ..ಪ್ರಿಮ್ ಮಿನಿಸ್ರು .. ಅವನ್ ಅ ****ನ್ನ್ ಯಾರ್ ಸಾರ್ ರಾಕೇಟು , ನಾವು ಚಂದ್ರನ್ಕೆ ಹೊಲಿಕಾಪ್ತ್ರು ಕಲ್ಸತಿವಿ (ಅವನ್ ಭಾಷೆನಲ್ಲೇ ಬರೆಯಲಾಗಿದೆ ಟೈಪಿಂಗ್ ಮಿಸ್ಟೇಕ್ ಅಲ್ಲ ). ನಾನೂ ಬೇರೆ ಮಾತನಾಡದೇನೆ ಮನಸ್ಸಿನಲ್ಲೇ ನಕ್ಕೊಂಡು ಜಂಗ್ಲಿ ಮೇಲೆ ಕೂತಿದ್ದೆ ನನ್ ಜಂಗ್ಲಿನು ನಗ್ತಾ ಇತ್ತು ಅಂತ ಕಾಣುತ್ತೆ ... . ನಾನ್ ಮೊದ್ಲೇ ಬಾಯಿ ಬಡ್ಕ , ನಾನ್ ಒಂದು ಮಾತಡೋದು ಅದು ಹೋಗಿ ಇನ್ನೇನೋ ಆಗೋದು .... ಯಾಕ್ ಬೇಕು .. ಮೊದ್ಲೇ ಎಲ್ರು ಫುಲ್ ಟೈಟು ...ಬಿಟ್ಟಿದ್ರೆ ಬಡ್ಡಿಮಕ್ಳು ರೋಡ್ ಮದ್ಯ ಏನೇನ್ ಮಾಡ್ತಾ ಇದ್ರೋ ದೇವರಿಗೆ ಗೊತ್ತು ! ಈ ಪುಢಾರಿಗಳದ್ದು ಒಂದು ಕಥೆ ಆದ್ರೆ , ಪೋಲಿಸ್ನವರದು ಕಥೆ ಇನ್ನೊಂದ್ ತರ .. ಟ್ರಾಫಿಕ್ ಕಂಟ್ರೋಲ್ ಮಾಡರಯ್ಯ ಅಂದ್ರೆ .... ಹೆಲ್ಮೆಟ್ ಹಾಕಿಲ್ದೆ ಇರೋರನ ಹಿಡ್ಯೋದು, ಲೈಸೆನ್ಸ್ ತೋರ್ಸು ಅನ್ನೋದು , ಬಡ್ಡೆತವ್ಕೆ ಸಿಕ್ಕಿದ್ದೇ ಚಾನ್ಸು !!

ನೆನ್ನೆ ಒಂದು ಬ್ಲಾಗ್ನಲ್ಲಿ ... ವ್ಯವಸ್ಥೆ ಬಗ್ಗೆ ಸುಮಾರು ಕಾಮೆಂಟ್ಸ್ ನಡೀತಾ ಇತ್ತು .. ಮತ್ತೆ ಈ ವ್ಯವಸ್ಥೆ ಬಗ್ಗೆ ಬರಿಯೋಕೆ ಮೂಡ್ ಇಲ್ಲ. ಅದು ಅಲ್ದೇನೆ ಪೇಪರ್ನೋರು, ಟಿವಿನೋರು "ಕುಮಾರ್ಸಾಮಿ ಜಾಮ್ " ಬಗ್ಗೆ ಸಾಕಷ್ಟು ಟ್ಯಾಲೆಂಟ್ ತೋರಿಸಿ ಆಗಿದೆ . ಅದು ಸಾಕಾಗಲ್ಲ ಅಂತ ನಮ್ ಪಕ್ಕದ ಮನೆ ಆಂಟಿ ಈ ಜಾಮ್ ಬಗ್ಗೆ ಸಾಕಷ್ಟು ಮಸಾಲೆ ಸೇರ್ಸಿ ನಮ್ ಬೀದಿಗೆಲ್ಲ ಮಂದಿಗೆಲ್ಲ ಬಾಳೆ ಎಲೆ ಹಾಸಿ ಬಡಿಸಿದ್ದು ಆಗಿದೆ .

ಆಗಲೇ ಸಾಕಷ್ಟು ಲೇಟ್ ಆಗಿತ್ತು .. ಸ್ನೇಹಿತನಿಗೆ ಒಂದು ಎಸ್.ಎಂ.ಎಸ್ . ಮಾಡ್ದೆ "got struck in bad jam.. will be late to room. prepare something to eat" " ಅದಕ್ಕವನ reply message ಹೀಗಿತ್ತು .. " oh.. bad jam.. better bring some good bread and butter while coming. i cant cook now.." ನಗು ತಡೆಯಲಾಗಲಿಲ್ಲ .. ಜೋರಾಗಿ ನಕ್ಕಿ ಬಿಟ್ಟೆ .. ಸುತ್ತಲಿನ ಜನ ನನ್ನೇ ನೋಡ್ತಾ ಇದ್ರೂ . ಎಲ್ಲಾ ಮುಖಗಳು ಸೀದಿ ಹೋದ ಬ್ರೆಡ್ ನಂತೆ ಕಂಡವು !!

ಕೊನೆಗೆ ನಾನೂ ಜಂಗ್ಲಿ ರೂಮಿಗೆ ಬಂದಾಗೆ ರಾತ್ರಿ 12.30 .. ಪಾಪ ಜಂಗ್ಲಿ ನನಗಿಂತ ಸುಸ್ತಾಗಿದ್ದ .. ದೊಡ್ಡದೊಂದು ಪ್ಲಾಸ್ಟಿಕ್ ಹೊದಿಸಿ .. ನಾನೂ ಬ್ರೆಡ್ ಹಾಗು ಮತ್ತೊಂದು ಬ್ಯಾಡ್ ಜಾಮ್ ತಿಂದು ಮಲಗಿದ್ದಾಯಿತು !!

ಬೆಳಿಗ್ಗೆ ಸ್ನೇಹಿತ ಕೇಳಿದ ಪ್ರಶ್ನೆಗೆ ತಡೆಯಲಾರದ ಸಿಟ್ಟು ಬಂದಿತ್ತು - " ಯಾವ್ ಊರಲ್ಲಿ ಟ್ರಾಫಿಕ್ ಜಾಮು..??" ..
(ಪಾಪ ಜ್ವರ ಅಂತ ಮೂರೂ ದಿನದಿಂದ ರೂಮು ಬಿಟ್ಟು ಎಲ್ಲೂ ಹೊರಗೆ ಕಾಲಿಟ್ಟಿಲ್ಲ)

Tuesday, November 18, 2008

ಹೀಗೊಬ್ಬ ಸ್ನೇಹಿತೆಯ ನೆನಪುಮೊನ್ನೆ ಚರಿತಾಳ ರೆಡ್ ವೈನ್ ರಾದ್ದಾಂತ ಓದಿದ ಮೇಲೆ , ಆರ್ಕುಟ್ ಎಂಬ Social Community ಯಲ್ಲಿ ನನಗಾದ ಒಂದು ಕೆಟ್ಟ ಅನುಭವವನ್ನು ಬರೀ ಬೇಕು ಅನ್ನಿಸ್ತು . ಈ ಲೇಖನ ಸ್ವಲ್ಪ ವೈಯುಕ್ತಿಕ ಅನ್ನಿಸಿದರೂ ಹೇಳಿ ಬಿಡುವ ಒಂದು ತವಕ .. ಸ್ವಲ್ಪ ತಡವಯಿತೇನೋ ಅಂತ ಅನ್ನ್ಸುತ್ತೆ

ರಾತ್ರಿ ಸುಮಾರು 11 ಗಂಟೆಯಾಗಿರಬಹುದು , ಸ್ನೇಹಿತೆ ನಳಿನಿಯ ಫೋನ್ .. " ಸಂತು ಬೇಗ ನಿನ್ ಆರ್ಕುಟ್ ಪ್ರೊಫೈಲ್ ಗೆ ಲಾಗ್ ಆಗು " ಅಂತ , ಈ ಸರೀ ರಾತ್ರಿ ನಲ್ಲಿ ಏನೇ ನಿಂದು ರಗಳೆ ಅಂತ ಕ್ಯಾತೆ ತೆಗೆದೆ . ಅದಕ್ಕವಳು ಇಲ್ಲ ಕಣೋ ನಿನ್ ಪ್ರೊಫೈಲ್ ನಿಂದ ಸಿಕ್ಕಾಪಟ್ಟೆ ಸ್ಕ್ರಾಪ್ ಬರ್ತಾ ಇದ್ದಾವೆ ", ಅವಳ ದ್ವನಿ ಸ್ವಲ್ಪ ನಡುಗುತಿತ್ತು , ಯಾಕೋ ಹೆದರಿದ್ದವಳಂತೆ ಅನ್ನಿಸ್ತಾ ಇತ್ತು . ತಕ್ಷಣ ಸ್ನೇಹಿತನ ಲ್ಯಾಪ್ಟಾಪ್ ಕನೆಕ್ಟ್ ಮಾಡಿ ನೋಡಿದಾಗ ನನಗೆ ಒಂದು ತರ ಅಸಹ್ಯ , ಲ್ಯಾಪ್ಟಾಪ್ ನ್ನು ಕುಕ್ಕಿ ಬಿಡುವಷ್ಟು ಕೋಪ ಬಂದಿತ್ತು . ನಳಿನಿಗೆ ಮತ್ತೆ ಫೋನ್ ಮಾಡ್ತೀನಿ ಅಂತ ಹೇಳಿ ಕಟ್ ಮಾಡಿದೆ . ಇಲ್ಲಿ ನಾನು ಮಾಡಿದ ಎಡವಟ್ಟು ಏನಪ್ಪಾ ಅಂದ್ರೆ , ನನ್ನ ರೂಮ್ ಹತ್ತಿರ ಇರುವ ಒಂದು ಬ್ರೌಸಿಂಗ್ ಸೆಂಟರ್ ನಲ್ಲಿ ಈ ಆರ್ಕುಟ್ ತೆಗೆದು , ಕೊನೆಗೆ ಸರಿಯಾಗಿ ಲಾಗ್ ಔಟ್ ಆಗದೆ ಹೊರ ಬಿದ್ದಿದ್ದೆ . ಇದನ್ನೇ ದುರುಪಯೋಗಪಡಿಸಿಕೊಂಡ ಕೆಲ ಕಿಡಿಗೇಡಿಗಳು ನಳಿನಿಯ ಮೆಸೇಜ್ ಬಾಕ್ಸ್ ನಲ್ಲಿ ತುಂಬ ಅಶ್ಲೀಲವಾದ ಪದಗಳನ್ನು ಬಳಸಿ ಮೆಸೇಜ್ ಮಾಡಲಾಗಿತ್ತು ... ಛೆ !! ಈಗಲೂ ನೆನೆದರೆ ತುಂಬ ಬೇಜಾರ್ ಆಗುತ್ತೆ .. ಎಲ್ಲವೂ ನನ್ನ ಬೀಜವಬ್ದಾರಿಯಿಂದ ಆಗಿದ್ದು ... ತಕ್ಷಣ ನಳಿನಿಗೆ ಫೋನ್ ಮಾಡಿದಾಗ , ಯಾಕೋ ಉತ್ತರ ಬರ್ಲಿಲ್ಲ , ಮನಸ್ಸು ಇನ್ನೂ ಹೆಚ್ಚಾಗಿ ಚದಪಡಿಸೋಕೆ ಶುರುವಾಯಿತು . ಇಲ್ಲ ಇನ್ನು ತಡಿಯೋದಿಕ್ಕೆ ಆಗೋಲ್ಲ ಗಾಡಿ ತಗೊಂಡು ನಳಿನಿ ಮನೆ ಹತ್ತಿರ ಹೊರಡಲು ಸಿದ್ಧನಾದೆ . ಅಷ್ಟರಲ್ಲಿ ನಳಿನಿಯ ಕರೆ ಬಂದು .. ನನಗೆ ಮಾತೆ ಹೊರಡಲಿಲ್ಲ , ಕೊನೆಗ ಗದ್ಗರಿಸಿ " ನಳಿನಿ .. ಗೊತ್ತಿಲ್ಲ ಕಣಮ್ಮ ಹೇಗ್ ಆಯಿತು ಅಂತ ".., ಸ್ನೇಹಿತೆ ಹೇಳಿದ್ದು ಒಂದೇ ಮಾತು " ನಂಗ್ ಗೊತ್ತು ಕಣೋ ..... ಇದು ಯಾರದೋ ಬೇರೆಯವರ ಕೆಲಸ ಅಂತ , ನೀನ್ ಯಾಕೆ ಅಷ್ಟೊಂದು ಬೇಜಾರ್ ಮಾಡ್ಕೊಳ್ತಿಯ" ಒಂದು ಕ್ಷಣ ಕಣ್ಣು ಮುಚ್ಚಿ ತೆಗೆದಾಗ ಗೊತ್ತಿಲ್ಲದೆ ಕಣ್ಣೀರು ಕೆನ್ನೆಗೆ ಇಳಿದಿತ್ತು .


ಇಂದು ನಳಿನಿ ಬದುಕಿಲ್ಲ .. ಯಾವೊದೋ ಒಂದು ದುರ್ಘಟನೆಯಲ್ಲಿ ಸ್ನೇಹಿತೆಯ ಇರುವು ಮರೆಯಾಗಿ ಒಂದು ವರ್ಷಗಳೇ ಕಳೆದು ಹೋಗಿದೆ . ನಾನು ನಳಿನಿ ಬಾಲ್ಯ ಸ್ನೇಹಿತರು , ಒಂದೇ ಕಡೆ ಓದಿದವರು .. ನಳಿನಿಗೆ ನಾರನಳ್ಳಿ ಅಂತ ಅಡ್ಡ ಹೆಸರು ನಾಮಕರಣ ಮಾಡಿದ್ದು ನಾನೇ .. ಸ್ಕೂಲ್ನಲ್ಲಿ ನಾರನಳ್ಳಿ ಹೆಸರು ಸಕತ್ ಹೆಸರು ಮಾಡಿತ್ತು. ಇನ್ನು ಅವಳ ಬಗ್ಗೆ ಹೇಳಲು ಬೇರೆಯೇ ಒಂದು ಲೇಖನ ಬರೀಬೇಕು . ಕೊನೆಗೂ ಗೆಳತಿ ನನಗೆ ಗೆಳೆತನದ ಅರ್ಥ ತಿಳಿಸಿ ಹೋಗಿದ್ದಳು . ನೆನದಾಗ ತುಂಬ ಭಾವುಕನಾಗ್ತಿನಿ ...


ಕೊನೆಗೆ ಆ ನನ್ನ ಆರ್ಕುಟ್ ಪ್ರೊಫೈಲ್ ಅನ್ನು ಡಿಲೀಟ್ ಮಾಡಿ ಹೊಸತೊಂದು ಮಾಡಿದಾಯಿತು . ಇಂದು ಈ social community ಬ್ಲಾಗ್ ಗಳು ನನ್ನ ಕಣ್ಣಿಗೆ ಮಕ್ಕಳು ಆಡುವ ಆಟದ ವಸ್ತುಗಳ ತರ ಕಾಣಿಸುತ್ತೆ . ಆಟಿಕೆಯೊಂದಿಗೆ ಹೆಚ್ಚು ಆಟ ಆಡುವ ಮನಸ್ಸು ಈಗ ನನ್ನಲಿಲ್ಲ .. ಅದಕ್ಕೆ ಈಗ ಈ ಬ್ಲಾಗ್ ಗಳಿಗೆ ಅಂಟಿಕೊಂಡಿದ್ದೇನೆ .